Bengaluru: 2025ರ IPL ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕನ ಹೆಸರು ಅಧಿಕೃತವಾಗಿದೆ. ಫಾಫ್ ಡು ಪ್ಲೆಸಿಸ್ ಸ್ಥಾನಕ್ಕೆ ಮಧ್ಯಪ್ರದೇಶದ ಪ್ರತಿಭಾನ್ವಿತ ಬ್ಯಾಟರ್ ರಜತ್ ಪಾಟೀದಾರ್ (Rajat Patidar) ಆಯ್ಕೆಯಾಗಿದ್ದಾರೆ. 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಾಟೀದಾರ್ ತಂಡವನ್ನು ಮುನ್ನಡೆಸಲಿದ್ದಾರೆ.
ನಾಯಕನಾಗಿ ಘೋಷಣೆಯಾಗುತ್ತಿದ್ದಂತೆಯೇ ಪಾಟೀದಾರ್ ಖಡಕ್ ಸಂದೇಶ ರವಾನಿಸಿದ್ದಾರೆ. “RCB ತಂಡಕ್ಕೆ ಅನೇಕ ದಿಗ್ಗಜರು ನಾಯಕರಾಗಿದ್ದಾರೆ. ಈಗ ನನ್ನ ಮೇಲೆ ನೆಚ್ಚವ ಬೃಹತ್ ಜವಾಬ್ದಾರಿಯನ್ನು ನೀಡಿದ್ದು ನನಗೆ ದೊಡ್ಡ ಗೌರವ. ನನ್ನ ನಾಯಕತ್ವ ಶೈಲಿ ವಿಭಿನ್ನವಾಗಿರಲಿದೆ. ನಾನು ಶಾಂತಚಿತ್ತನಾಗಿದ್ದು, ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
ಅವರು ತಮ್ಮ ಶಕ್ತಿಯ ಬಗ್ಗೆ ಹೇಳುತ್ತಾ, “ನಾವು ಜಾಸ್ತಿ ಎಕ್ಸ್ಪ್ರೆಸ್ ಮಾಡೋಲ್ಲ, ಒತ್ತಡದ ಸಂದರ್ಭದಲ್ಲೂ ಗಾಬರಿಯಾಗುವುದಿಲ್ಲ. ನನ್ನ ಅನುಭವಿಗಳ ಸಲಹೆಗಳನ್ನು ಅಳವಡಿಸಿಕೊಂಡು ಉತ್ತಮ ನಾಯಕನಾಗಲು ಪ್ರಯತ್ನಿಸುತ್ತೇನೆ” ಎಂದಿದ್ದಾರೆ.
“2021ರಲ್ಲಿ ನಾನು RCBಗೆ ಸೇರಿ, 2022ರ ಹರಾಜಿನಲ್ಲಿ ಖರೀದಿಯಾಗದೇ ಬೇಸರಗೊಂಡೆ. ಆದರೆ ಬದಲಿ ಆಟಗಾರನಾಗಿ ಹಿಂತಿರುಗಲು ಅವಕಾಶ ಸಿಕ್ಕಿತು. 2023ರಲ್ಲಿ ಗಾಯಗೊಂಡು ಸಂಪೂರ್ಣ ಟೂರ್ನಿಯಿಂದ ಹೊರಬಿದ್ದರೂ, ಅಭಿಮಾನಿಗಳ ಬೆಂಬಲ ನನ್ನ ಆತ್ಮವಿಶ್ವಾಸ ಹೆಚ್ಚಿಸಿತು. 2024ರಲ್ಲಿ ರೀಟೈನ್ ಆಟಗಾರನಾಗಿ ಆಯ್ಕೆಗೊಂಡಿದ್ದು ನನಗೆ ಬಹಳ ಸಂತೋಷ. ಈಗ ನಾಯಕತ್ವದ ಜವಾಬ್ದಾರಿ ಸಿಕ್ಕಿದ್ದು ನನಗೆ ಮತ್ತೊಂದು ದೊಡ್ಡ ಅವಕಾಶ” ಎಂದು ಪಾಟೀದಾರ್ ಹೇಳಿದ್ದಾರೆ. 2025ರ ಮಾರ್ಚ್ 21ರಿಂದ ಐಪಿಎಲ್ ಆರಂಭವಾಗಲಿದ್ದು, ಪಾಟೀದಾರ್ ನೇತೃತ್ವದಲ್ಲಿ ಆರ್ಸಿಬಿ ಚೊಚ್ಚಲ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ!