ಬೆಂಗಳೂರು: ಈ ಹಣಕಾಸು ವರ್ಷದ (2024-25) ಮೊದಲ 10 ತಿಂಗಳಲ್ಲಿ ಭಾರತದಿಂದ ರಫ್ತಾದ (exports) ಸ್ಮಾರ್ಟ್‌ಫೋನ್ (Smartphone) ಮೌಲ್ಯ 1.50 ಲಕ್ಷ ಕೋಟಿ ರೂ ದಾಟಿದೆ. ಏಪ್ರಿಲ್‌ನಿಂದ ಜನವರಿವರೆಗೆ 1.55 ಲಕ್ಷ ಕೋಟಿ ರೂ ಮೌಲ್ಯದ ಸ್ಮಾರ್ಟ್‌ಫೋನ್ ರಫ್ತಾಗಿದ್ದು, ಜನವರಿಯಲ್ಲೇ 25,000 ಕೋಟಿ ರೂ ಮೌಲ್ಯದ ರಫ್ತು ನಡೆದಿದೆ. ಕಳೆದ ವರ್ಷ ಜನವರಿಯೊಂದಿಗೆ ಹೋಲಿಸಿದರೆ ಶೇ. 140ರಷ್ಟು ಹೆಚ್ಚಳವಾಗಿದೆ.
2023-24ರಲ್ಲಿ 1.31 ಲಕ್ಷ ಕೋಟಿ ರೂ ಮೌಲ್ಯದ ಸ್ಮಾರ್ಟ್‌ಫೋನ್ ರಫ್ತಾಗಿದ್ದವು. 2023ರ ಏಪ್ರಿಲ್‌ನಿಂದ 2024ರ ಜನವರಿವರೆಗೆ 99,120 ಕೋಟಿ ರೂ ಮೌಲ್ಯದ ರಫ್ತು ನಡೆದಿತ್ತು. ಈ ವರ್ಷ ಅದಕ್ಕಿಂತ ಶೇ. 56ರಷ್ಟು ಹೆಚ್ಚಳವಾಗಿದೆ. ಮುಂದಿನ ತಿಂಗಳುಗಳಲ್ಲಿಯೂ ಇದೇ ಪ್ರಗತಿ ಮುಂದುವರಿದರೆ, 2 ಲಕ್ಷ ಕೋಟಿ ರೂ ಗುರಿ ಮುಟ್ಟಬಹುದು. ಸಚಿವ ಡಾ. ಎ. ವೈಷ್ಣವ್ ಪ್ರಕಾರ ಈ ಹಣಕಾಸು ವರ್ಷದ ಅಂತ್ಯಕ್ಕೆ 1.70 ಲಕ್ಷ ಕೋಟಿ ರೂ ಅಥವಾ 20 ಬಿಲಿಯನ್ ಡಾಲರ್ ಮಟ್ಟ ತಲುಪಬಹುದು.
ಭಾರತದಿಂದ ರಫ್ತಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನವು ಆಪಲ್ ಐಫೋನ್‌ಗಳೇ. ಫಾಕ್ಸ್ಕಾನ್ ಕಂಪನಿಯೇ ಶೇ. 70ರಷ್ಟು ರಫ್ತಿಗೆ ಕಾರಣವಾಗಿದೆ. ಕೋಲಾರದ ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಿಂದಲೂ ಐಫೋನ್ ವಿದೇಶಗಳಿಗೆ ರಫ್ತು ಆಗುತ್ತಿದೆ.
ಐಫೋನ್ ನಂತರ ಹೆಚ್ಚಿನ ರಫ್ತಾಗುವ ಬ್ರಾಂಡ್ ಸ್ಯಾಮ್ಸಂಗ್. ಒಟ್ಟಾರೆ ಸ್ಮಾರ್ಟ್‌ಫೋನ್ ರಫ್ತಿನಲ್ಲಿ ಸ್ಯಾಮ್ಸಂಗ್ ಶೇ. 20ರಷ್ಟು ಪಾಲು ಹೊಂದಿದೆ.
ದಶಕದ ಹಿಂದೆ ಭಾರತ ಸ್ಮಾರ್ಟ್‌ಫೋನ್ ರಫ್ತಿನಲ್ಲಿ 67ನೇ ಸ್ಥಾನದಲ್ಲಿತ್ತು. 2020ರಲ್ಲಿ ಪ್ರೋಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಯ ಜಾರಿಗೆ ಬಂದ ಬಳಿಕ ರಫ್ತು ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ವರ್ಷದಿಂದ ವರ್ಷಕ್ಕೆ ಭಾರತದ ಸ್ಮಾರ್ಟ್‌ಫೋನ್ ರಫ್ತು ಉತ್ತೇಜನ ಪಡೆಯುತ್ತಿದೆ.