Bengaluru: ಮಹಾರಾಷ್ಟ್ರದಲ್ಲಿ ನೋಂದಾಯಿಸಿಕೊಂಡು, ಕರ್ನಾಟಕದಲ್ಲಿ ರಸ್ತೆ ತೆರಿಗೆ ಪಾವತಿಸದೇ ಕಾರು ಬಳಕೆ ಮಾಡಿದ ಕಾರಣಕ್ಕೆ ಉದ್ಯಮಿ ಕೆಜಿಎಫ್ ಬಾಬು (KGF Babu) ಅವರಿಗೆ RTO ಅಧಿಕಾರಿಗಳು ಬೆಳಗ್ಗೆ ದಾಳಿ ನಡೆಸಿದ್ದಾರೆ.
ವಸಂತನಗರದಲ್ಲಿರುವ ಅವರ ಮನೆಯ ಮೇಲೆ RTO ಜಂಟಿ ಆಯುಕ್ತೆ ಎಂ. ಶೋಭಾ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ಕಾರಿಗೆ ಸಂಬಂಧಿಸಿದ ತೆರಿಗೆಯನ್ನು ಪಾವತಿಸಲು ಸೂಚಿಸಿ ಹೋಗಿದ್ದಾರೆ.
ಕೆಜಿಎಫ್ ಬಾಬು ಅವರು ರೋಲ್ಸ್ ರಾಯ್ಸ್, ವೆಲ್ಫೈರ್, ಪೋಶೆ ಮುಂತಾದ ಐಷಾರಾಮಿ ಕಾರುಗಳ ಮಾಲೀಕರಾಗಿದ್ದು, ಮುಂಬೈನಲ್ಲಿನ ನೋಂದಾಯಿತ ಕಾರನ್ನು 1 ವರ್ಷಕ್ಕೂ ಹೆಚ್ಚು ಕಾಲ ಬೆಂಗಳೂರಿನಲ್ಲಿ ಬಳಸುತ್ತಿದ್ದ ಕಾರಣ ದಾಳಿ ನಡೆದಿದೆ.
“ಇದು ದೊಡ್ಡ ವಿಚಾರವಲ್ಲ. ನಾನು ಕಾರನ್ನು ಬಾಂಬೆ ಮತ್ತು ಬೆಂಗಳೂರಿನಲ್ಲಿ ಓಡಿಸುತ್ತಿದ್ದೇನೆ. 1 ವರ್ಷಕ್ಕಿಂತ ಹೆಚ್ಚು ಇಲ್ಲಿ ಇರದಂತೆ ಕಾನೂನಿದೆ ಅಂತ ತಿಳಿಸಲಾಗಿದೆ. ಅಧಿಕಾರಿಗಳು ಮಾಹಿತಿ ನೀಡಿದ ಮೇಲೆ ನಾನು ಇಂದು ಟ್ಯಾಕ್ಸ್ ಪಾವತಿಸುತ್ತೇನೆ” ಎಂದರು.
ಇದಕ್ಕೂ ಮೊದಲು, ಇದೇ ತಿಂಗಳಲ್ಲಿ ಬಂಗ್ಲೂರು ದಕ್ಷಿಣ RTO ಅಧಿಕಾರಿಗಳು ಫೆರಾರಿ ಕಾರಿನ ಮಾಲೀಕನಿಗೆ ₹1.4 ಕೋಟಿ ದಂಡ ವಿಧಿಸಿದ್ದರು. ಅವರು ನಂತರ ದಂಡ ಪಾವತಿಸಿದ್ದರು.
ರಾಜ್ಯದ ವಿವಿಧೆಡೆ, ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು, ಮೈಸೂರು, ಬಳ್ಳಾರಿ, ಕೊಪ್ಪಳ ಸೇರಿ ಹಲವೆಡೆ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.