New Delhi: 2024ರ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ಸೇರಿ ವಿಪಕ್ಷಗಳು ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (Former Chief Election Commissioner Rajiv Kumar) ಅವರ ಹೆಸರು ಮುನ್ನೆಲೆಗೆ ಬಂತು.
ಸಾಮಾಜಿಕ ಮಾಧ್ಯಮಗಳಲ್ಲಿ, ಅವರು ಭಾರತ ತೊರೆದು ವಿದೇಶಕ್ಕೆ ಹೋಗಿದ್ದಾರೆ ಎಂಬ ಸುದ್ದಿ ಹರಿದಾಡಿತು. ಆದರೆ, ಅವರ ಕುಟುಂಬ ಮತ್ತು ಆಪ್ತರು ಇದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ರಾಜೀವ್ ಕುಮಾರ್ ಇದೀಗ ಭಾರತದಲ್ಲೇ ಇದ್ದಾರೆ, ಮಾಲ್ಟಾಗೆ ಹೋಗಿದ್ದಾರೆ ಎನ್ನುವ ವದಂತಿ ನಿಜವಲ್ಲ.
ರಾಹುಲ್ ಗಾಂಧಿ ಅವರು ಕರ್ನಾಟಕ, ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಭಾರೀ ಪ್ರಮಾಣದಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿ, ಕರ್ನಾಟಕದ ಮಹದೇವಪುರ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ಕೃತಕ ಮತದಾಖಲೆಗಳಿದ್ದವು ಎಂದು ದಾಖಲೆಗಳೊಂದಿಗೆ ಮಾಧ್ಯಮಗೋಷ್ಟಿ ನಡೆಸಿದ್ದರು. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.