Houston, United States: ಮಧ್ಯ ಟೆಕ್ಸಾಸ್ ನಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ಉಂಟಾದ ಅತಿದೊಡ್ಡ ಪ್ರವಾಹದಲ್ಲಿ (Severe flooding) ಕನಿಷ್ಠ 13 ಮಂದಿ ಸಾವಿಗೀಡಾಗಿದ್ದಾರೆ. ಗ್ವಾಡಾಲುಪೆ ನದಿಯ ಸಮೀಪದಲ್ಲಿರುವ ಬೇಸಿಗೆ ಶಿಬಿರಗಳಿಂದ 20ಕ್ಕೂ ಹೆಚ್ಚು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆರ್ ಕೌಂಟಿಯ ನ್ಯಾಯಾಧೀಶ ರಾಬ್ ಕೆಲ್ಲಿ ಅವರು ಮೃತರ ಸಂಖ್ಯೆ ದೃಢಪಡಿಸಿದ್ದಾರೆ. ಆದರೆ ಮೃತಪಟ್ಟವರ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಶೆರಿಫ್ ಕಚೇರಿ ಪ್ರಕಾರ, ಕುಟುಂಬಗಳಿಗೆ ಮೊದಲಿಗೆ ಮಾಹಿತಿ ನೀಡಬೇಕೆಂಬ ಕಾರಣದಿಂದ ಹೆಚ್ಚಿನ ಮಾಹಿತಿಯನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಿಲ್ಲ.
“ಇನ್ನೂ ಎಲ್ಲರೂ ಲೆಕ್ಕಕ್ಕೆ ಬಂದಿಲ್ಲ” ಎಂದು ಕೆಲ್ಲಿ ತಿಳಿಸಿದ್ದಾರೆ. ನದಿಯ ಉದ್ದಕ್ಕೂ ಹಲವು ಬೇಸಿಗೆ ಶಿಬಿರಗಳು ಇದ್ದು, ಕ್ಯಾಂಪ್ ಮಿಸ್ಟಿಕ್ ಎಂಬ ಹುಡುಗಿಯರ ಶಿಬಿರವೂ ಇದರಲ್ಲಿ ಸೇರಿದೆ. ಮಕ್ಕಳ ಪೋಷಕರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.
ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಕಾರ್ಯಾಚರಣೆ ಭರದಿಂದ ನಡೆಯುತ್ತಿದ್ದು, ಟ್ಯಾಕ್ಟಿಕಲ್ ಡಿಪ್ಲಾಯಮೆಂಟ್ ಯೂನಿಟ್ ಸಹ ಭಾಗಿಯಾಗಿದೆ. ಗ್ವಾಡಾಲುಪೆ ನದಿಯ ನೀರಿನ ಮಟ್ಟ 7.5 ಅಡಿಯಿಂದ ಅಚಾನಕ್ 30 ಅಡಿಗೆ ಏರಿದೆ.
ಆನ್‌ಲೈನ್‌ನಲ್ಲಿ ಹರಿದಿರುವ ವಿಡಿಯೋಗಳಲ್ಲಿ, ನದಿಯ ಉಕ್ಕುವ ದೃಷ್ಯಗಳು, ಕಾರುಗಳು, ಕ್ಯಾಂಪರ್‌ಗಳು ಮತ್ತು ಮೊಬೈಲ್ ಮನೆಗಳು ಪ್ರವಾಹಕ್ಕೆ ಕೊಚ್ಚಿಹೋಗುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.