Hubballi: ಶಿಗ್ಗಾಂವಿ (Shiggaon) ಉಪ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದ ಅಜ್ಜಂಪೀರ್ ಖಾದ್ರಿಗೆ (Ajjampir Qadri) ಕರ್ನಾಟಕ ಸರ್ಕಾರ ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ (Hubballi Electricity Supply Corporation-HESCOM) ಅಧ್ಯಕ್ಷ ಸ್ಥಾನ ನೀಡಿದೆ.
ಅಜ್ಜಂಪೀರ್ ಖಾದ್ರಿ ನವೆಂಬರ್ 29 ರಂದು ಮಧ್ಯಾಹ್ನ 3 ಗಂಟೆಗೆ ಹೆಸ್ಕಾಂ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಶಿವಾನಂದ ಪಾಟೀಲ್, ಜಮೀರ್ ಅಹ್ಮದ್ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
1999ರಲ್ಲಿ ಜೆಡಿಎಸ್ ರಿಂದ ಸ್ಪರ್ಧಿಸಿ ಶಿಗ್ಗಾಂವಿಯಲ್ಲಿ ಜಯ ಸಾಧಿಸಿದ್ದ ಖಾದ್ರಿ, 2008 ರಿಂದ 2023ರವರೆಗೆ ಕಾಂಗ್ರೆಸ್‌ಪಕ್ಷದಿಂದ ಸ್ಪರ್ಧಿಸಿದರೂ ಸೋಲನ್ನು ಅನುಭವಿಸಿದರು. ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಣೆಯಿಂದ ಬೇಸತ್ತ ಖಾದ್ರಿ ಬಂಡಾಯವೆದ್ದು, ನಾಮಪತ್ರ ಸಲ್ಲಿಸಿದ್ದರು.
ಪಕ್ಷದ ವರಿಷ್ಠರು ಖಾದ್ರಿಯ ಮನವೊಲಿಸಲು ಸಚಿವ ಜಮೀರ್ ಅಹ್ಮದ್ ಅವರನ್ನು ನೇಮಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆಯ ನಂತರ ಖಾದ್ರಿ ನಾಮಪತ್ರ ವಾಪಸ್ ಪಡೆದರು. ಇದೀಗ ಅವರಿಗೆ ಹೆಸ್ಕಾಂ ಅಧ್ಯಕ್ಷ ಸ್ಥಾನ ನೀಡಲಾಗಿದೆ, ಇದು ರಾಜಕೀಯ ಸಮಾಧಾನ ಕ್ರಮವೆಂದು ಪರಿಗಣಿಸಲಾಗಿದೆ.