back to top
26.5 C
Bengaluru
Tuesday, July 15, 2025
HomeChikkaballapuraSidlaghattaಹಸಿರು ಸುಗಟೂರು-ಸಸಿ ವಿತರಣೆ, ನೋಟ್‌ ಪುಸ್ತಕ, ಲೇಖನ ಸಾಮಗ್ರಿಗಳ ವಿತರಣೆ

ಹಸಿರು ಸುಗಟೂರು-ಸಸಿ ವಿತರಣೆ, ನೋಟ್‌ ಪುಸ್ತಕ, ಲೇಖನ ಸಾಮಗ್ರಿಗಳ ವಿತರಣೆ

- Advertisement -
- Advertisement -

Sugaturu, Sidlaghatta : ಮಾವು, ಹುಣಸೆ, ಹಲಸಿನಂತಹ ಗಿಡಗಳನ್ನು ಬೆಳೆಸುವುದರಿಂದ ಲಾಭದಾಯಕವೂ, ಇತರೆ ಪ್ರಾಣಿ, ಪಕ್ಷಿಸಂಕುಲಕ್ಕೆ ಉಪಯೋಗವೂ ಆಗುತ್ತದೆ. ಹಸಿ ಮತ್ತು ಒಣಕಸ ವಿಲೇ ಕುರಿತು, ಏಕಬಳಕೆಯ ಪ್ಲಾಸ್ಟಿಕ್ ವರ್ಜನೆ ಬಗ್ಗೆ ಮತ್ತಷ್ಟು ಜಾಗೃತಿ ಅಗತ್ಯವಿದೆ. ಸಸ್ಯಗಳ ಪೋಷಣೆ, ಪರಿಸರ ಸಂರಕ್ಷಣೆಯು ಬದುಕಿನ ಭಾಗವಾಗಬೇಕು ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆಂಜನೇಯ ತಿಳಿಸಿದರು.

ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸುಂದರಲಾಲ್ ಬಹುಗುಣ ಇಕೋಕ್ಲಬ್, ಎಚ್‌.ಡಿ.ಡಿ ಮತ್ತು ಜೆ.ಪಿ.ಎನ್ ಟ್ರಸ್ಟ್, ಹಿರಿಯ ವಿದ್ಯಾರ್ಥಿಗಳ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಹಸಿರು ಸುಗಟೂರು- ಸಸಿಗಳ ವಿತರಣೆ, ಸಸಿನೆಡುವ ಆಂದೋಲನಕ್ಕೆ ಚಾಲನೆ, ವಿದ್ಯಾರ್ಥಿಗಳಿಗೆ ಉಚಿತ ನೋಟ್‌ ಪುಸ್ತಕ, ಲೇಖನ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರೈತರು ಮಳೆಗಾಲದಲ್ಲಿ ನೀರು ಹರಿಯುವ, ತೇವ ಇರುವ ಸ್ಥಳಗಳಲ್ಲಿ ವರ್ಷಕ್ಕೆ ಕನಿಷ್ಟ ಇಂತಿಷ್ಟು ಮರಗಳನ್ನು ಬೆಳೆಸಬೇಕೆಂಬ ಹಂಬಲ ಹೊಂದಿರುತ್ತಿದ್ದರು. ಮಳೆ ಬೀಳದಿದ್ದರೂ ನೀರನ್ನು ಹೊತ್ತೊಯ್ದು ಹಾಕಿ ಮರಗಳನ್ನು ವರ್ಷಗಟ್ಟಲೇ ಕಾಪಾಡುತ್ತಿದ್ದರು. ಸಮಯದ ಅಭಾವ, ಕೃಷಿ ಭೂಮಿಯ ಕೊರತೆ, ಅಂತರ್ಜಲ ಮಟ್ಟದ ಕುಸಿತ, ಕಿರಿಯರಲ್ಲಿ ಕೃಷಿ ಬಗೆಗಿನ ಅಸಡ್ಡೆಗಳಿಂದಾಗಿ ಮರ ಬೆಳೆಸಲು ಪರಿಸರ ದಿನಾಚರಣೆಯನ್ನು ಕಾಯುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಶಾಲೆಯ ಹಿರಿಯ ವಿದ್ಯಾರ್ಥಿ, ಎಂಜಿನಿಯರ್ ದಿನೇಶ್ ಮಾತನಾಡಿ, ಪರಿಸರ ಸಂರಕ್ಷಣೆಯು ದಿನನಿತ್ಯದ ಚಟುವಟಿಕೆಯಂತಾಗಿ ಎಲ್ಲರಲ್ಲಿಯೂ ಪರಿಸರದ ಕಾಳಜಿ ಪ್ರತಿ ಮನೆಯಿಂದಲೂ ಆರಂಭವಾಗಬೇಕು ಎಂಬ ಆಶಯದಿಂದ ಮನೆಮನೆಗೆ ಗಿಡಗಳನ್ನು ವಿತರಿಸಲಾಗುತ್ತಿದೆ. ಉತ್ತಮವಾಗಿ ಪೋಷಿಸಿದರೆ ಮುಂದಿನ ದಿನಗಳಲ್ಲಿ ಹಸಿರು ಸುಗಟೂರು ಯೋಜನೆ ಸಾರ್ಥಕವಾಗಲಿದೆ. ಅಂತರ್ಜಲ ಮಟ್ಟದ ಹೆಚ್ಚಳ, ಶುದ್ಧಗಾಳಿ, ಸುಂದರ ವಾತಾವರಣ ನಮ್ಮ ಗ್ರಾಮಕ್ಕೆ ಲಭ್ಯವಾಗಲಿದೆ. ಉತ್ತಮವಾಗಿ ಗಿಡಗಳನ್ನು ಪೋಷಿಸಿದವರಿಗೆ ಸನ್ಮಾನಿಸಲಾಗುವುದು ಎಂದರು.

ಜಾಗೃತಿ ಜಾಥಾ: ಹಸಿರು ಸುಗಟೂರು-ಶೀರ್ಷಿಕೆಯಲ್ಲಿ ಪರಿಸರ ಗೀತೆಗೆ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ, ವಿವಿಧ ಘೋಷಣೆಗಳೊಂದಿಗೆ ಜಾಗೃತಿಜಾಥಾ ನಡೆಯಿತು. ನೃತ್ಯಗಾರ ಎಸ್.ಜೆ. ಚಂದ್ರಮೋಹನ್ ಅವರಿಂದ ಪ್ರದರ್ಶನಗೊಂಡ ಪರಿಸರ ಕಾಳಜಿ ಕುರಿತ ಮೂಕಾಭಿನಯವು ಎಲ್ಲರ ಗಮನಸೆಳೆಯಿತು. ಮನೆಮನೆಗಳಿಗೆ ತೆರಳಿ ತೆಂಗು, ಅಡಿಕೆ, ಹೂವಿನ ಗಿಡಗಳನ್ನು ವಿತರಿಸಿ ನೆಟ್ಟು ಪೋಷಿಸಲು ತಿಳಿಸಲಾಯಿತು. ಎಚ್‌.ಡಿ.ಡಿ ಮತ್ತು ಜೆ.ಪಿ.ಎನ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಪ್ರತಿ ಮನೆಗಳಿಗೆ ತೆರಳಿ ಗಿಡಗಳನ್ನು ಹಂಚಲಾಯಿತು.

ತಾಲ್ಲೂಕು ಬಿ.ಆರ್‌.ಸಿ ಸಮನ್ಯಾಧಿಕಾರಿ ಕೆ.ಎಚ್.ಪ್ರಸನ್ನಕುಮಾರ್, ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ಎಸ್‌.ಡಿ.ಎಂ.ಸಿ ಅಧ್ಯಕ್ಷ ವೆಂಕಟೇಶ್, ಗ್ರಾಮಪಂಚಾಯಿತಿ ಸದಸ್ಯ ಎ.ಸತೀಶ್‌ ಕುಮಾರ್, ಯುವಮುಖಂಡ ಅಶೋಕ್, ನಾರಾಯಣಸ್ವಾಮಿ, ಎಂ.ನಾಗರಾಜು, ಗುತ್ತಿಗೆದಾರ ದೇವರಾಜು, ಶಿವಶಂಕರಪ್ಪ, ಮಾಜಿ ಸದಸ್ಯ ಎನ್.ಅಶ್ವತ್ಥಪ್ಪ, ಮಾಜಿ ಸದಸ್ಯೆ ಭಾಗ್ಯಮ್ಮ ಅರುಣ್‌ ಕುಮಾರ್, ಸಿ.ಆರ್‌.ಪಿ ರಮೇಶ್‌ ಕುಮಾರ್, ಬಿ.ಎಂ.ಜಗದೀಶ್‌ ಕುಮಾರ್, ಎಸ್‌.ಡಿ.ಎಂ.ಸಿ ಸದಸ್ಯ ನಾರಾಯಣಸ್ವಾಮಿ, ನಾಗೇಶ್, ಗ್ರಾಮಸ್ಥರಾದ ನಂಜುಂಡಪ್ಪ, ನಂದಿನಿ ದಿನೇಶ್, ಸರೋಜಮ್ಮ, ಬೆಂಗಳೂರಿನ ನಾಗರಾಜು, ಕೃಷ್ಣಪ್ಪ, ಪಿಳ್ಳಣ್ಣ, ಬಚ್ಚೇಗೌಡ, ನಿವೃತ್ತ ಶಿಕ್ಷಕ ಸತ್ಯನಾರಾಯಣ್, ಗ್ರಾಮಸ್ಥರು ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page