
Marappanahalli, Sidlaghatta : ತಾಲ್ಲೂಕಿನ ಮಾರಪ್ಪನಹಳ್ಳಿ ಗ್ರಾಮದ ರಸ್ತೆ ಬದಿಯಲ್ಲಿದ್ದ ನೂರಾರು ವರ್ಷಗಳ ಕಾಲದ ಆಲದಮರ ಗುರುವಾರ ಸಂಜೆ ಉರುಳಿ ಬಿದ್ದಿದ್ದು ಸುಮಾರು ಮೂರು ಮನೆಗಳು ಸೇರಿದಂತೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಕ್ಕೆ ಸಣ್ಣ ಪುಟ್ಟ ಹಾನಿಯಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕಳೆದೆರಡು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ತಾಲ್ಲೂಕಿನ ಮಾರಪ್ಪನಹಳ್ಳಿ ಗ್ರಾಮದ ರಸ್ತೆ ಬದಿಯಲ್ಲಿದ್ದ ಸುಮಾರು 400 ವರ್ಷಗಳಿಗೂ ಹಳೆಯದಾದ ಎರಡು ಆಲದ ಮರಗಳು ಗುರುವಾರ ಸಂಜೆ ದಿಡೀರನೆ ನೆಲಕ್ಕೆ ಕುಸಿದಿದೆ.
ಗ್ರಾಮದ ಮುನಿವೆಂಕಟರಾಮಯ್ಯ, ವೆಂಕಟೇಶ್ ಹಾಗು ಮುನೇಗೌಡರಿಗೆ ಸೇರಿದ ಮನೆಗಳ ಮೇಲೆ ಕೊಂಬೆಗಳು ಬಿದ್ದು ಸಣ್ಣ ಪುಟ್ಟ ಹಾನಿಯಾಗಿದೆ.
ಸಂಜೆ 5 ಗಂಟೆ ಸುಮಾರಿಗೆ ಮರಗಳು ಬಿದ್ದಿದ್ದು ಇನ್ನೊಂದು ತಾಸು ತಡವಾಗಿದ್ದರೆ ಗ್ರಾಮದ ಬಹುತೇಕರು ಹಾಲು ಡೈರಿಯ ಬಳಿ ಹಾಲು ಹಾಕಲು ಬರುತ್ತಿದ್ದರು. ಹಾಗಾಗಿ ಯಾವುದೇ ಅವಘಡ ಆಗಿಲ್ಲ.