Belagavi : ಬೈಲಹೊಂಗಲ (Bailhongal) ಸಮೀಪದ ಸೊಗಲ ಗ್ರಾಮದ ಸುಕ್ಷೇತ್ರ ಸೋಮೇಶ್ವರ ದೇವಸ್ಥಾನದ (Sogal Sri Someshwara Swamy Temple) ಹೊಂಡದಲ್ಲಿ ಶುಕ್ರವಾರ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಸರಳವಾಗಿ ತೆಪ್ಪೋತ್ಸವ (Teppotsava) ನಡೆಯಿತು.
ಪ್ರತಿ ವರ್ಷದ೦ತೆ ಬಾಳೆ ದಿಂಡಿನ ತೆಪ್ಪದ ರಥಕ್ಕೆ ಕಬ್ಬು, ತೆಂಗು, ವಿವಿಧ ಹೂವುಗಳಿಂದ ಅಲಂಕರಿಸಿದ ತೆಪ್ಪದಲ್ಲಿ ಸೋಮೇಶ್ವರನ ದೇವಸ್ಥಾನದಲ್ಲಿದ್ದ ಬೆಳ್ಳಿಯ ಮೂರ್ತಿಯನ್ನು ಪಲ್ಲಕಿಯಲ್ಲಿ ತಂದು ತೆಪ್ಪದ ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ಆರ್ಚಕರು, ಪೂಜಾರಿ ಮನೆತನದವರು, ಟ್ರಸ್ಟ್ ಅಧ್ಯಕ್ಷರು, ಸದಸ್ಯರು ಕೊರೊನಾ ನಿಯಮ ಪಾಲಿಸಿ, ಸರಳವಾಗಿ ತೆಪ್ಪೋತ್ಸವ ನೆರವೇರಿಸಿದರು. ನಂತರ ಐದು ಹೆಜ್ಜೆ ಮಾತ್ರ ರಥ ಎಳೆದರು.
ಕ್ಷೇತ್ರದ ದೇವಾಲಯಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಸೋಮೇಶ್ವರನ, ಶಿವ-ಪಾರ್ವತಿ ಗದ್ದುಗೆಯನ್ನು ಹೂಗಳಿಂದ ಸಿಂಗರಿಸಿ ಬಿಲ್ವಾರ್ಚನೆ, ತ್ರಿಕಾಲ ಪೂಜೆ, ಬುತ್ತಿ, ಎಲೆ, ಮೂರ್ತಿ ಪೂಜೆ, ಪ್ರಾರ್ಥನೆ, ಪುಷ್ಪಾರ್ಚನೆ, ಅಲಂಕಾರ, ಪುಷ್ಪಮಾಲೆ, ಸಹಸ್ರ ಬಿಲ್ವಾರ್ಚನೆ, ಅಭಿಷೇಕಗಳೊಂದಿಗೆ ವಿಶೇಷ ಪೂಜೆ ನಡೆಯಿತು.
ಮುರಗೋಡ ಸಿಪಿಐ ಮೌನೇಶ್ವರ ಮಾಳಿಪಾಟೀಲ, ಪಿಎಸ್ಐ ಪ್ರವೀಣ ಗಂಗೋಳ, ಪೋಲಿಸ್ ಸಿಬ್ಬಂದಿ, ಗೃಹ ರಕ್ಷಕ ಸಿಬ್ಬಂದಿ ಬಿಗಿ ಬಂದೋಬಸ್ತ್ ಕೈಕೊಂಡಿದ್ದರು.