Online Betting ಆ್ಯಪ್‌ಗಳನ್ನು ನಿಷೇಧಿಸಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಕುರಿತು ಸುಪ್ರೀಂ ಕೋರ್ಟ್‌ದಲ್ಲಿ ವಿಚಾರಣೆ ನಡೆಯಿತು. ಇದೇ ವಿಚಾರವಾಗಿ ನ್ಯಾಯಾಲಯವು ಎಲ್ಲಾ ರಾಜ್ಯಗಳಿಗೆ, ಭಾರತೀಯ ರಿಸರ್ವ್ ಬ್ಯಾಂಕ್ (RBI), ಜಾರಿ ನಿರ್ದೇಶನಾಲಯ (ಇಡಿ), ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮತ್ತು ಕೆಲ ಗೇಮಿಂಗ್ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿದೆ. ಆಗಸ್ಟ್ 18ರಂದು ಮುಂದಿನ ವಿಚಾರಣೆ ನಡೆಯಲಿದೆ.
ಜುಲೈ 1ರಂದು ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶ ಸೂರ್ಯಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು Online Betting ನಿಷೇಧದ ಕುರಿತ ಅರ್ಜಿಯನ್ನು ಗಮನಕ್ಕೆ ತೆಗೆದುಕೊಂಡಿತು. ನ್ಯಾಯಾಲಯವು ಈ ಬಗ್ಗೆ ಗೂಗಲ್ ಇಂಡಿಯಾ, ಆಪಲ್ ಇಂಡಿಯಾ, ಡ್ರೀಮ್ 11, ಎಂಪಿಎಲ್ ಮತ್ತು ಎ23 ಗೇಮ್ಸ್ ನಂತಹ ಕಂಪನಿಗಳ ಪ್ರತಿಕ್ರಿಯೆ ಕೂಡ ಕೋರಿದೆ.
ಕ್ರೈಸ್ತ ಧರ್ಮೋಪದೇಶಕ ಕೆ.ಎ. ಪಾಲ್ ಸಲ್ಲಿಸಿರುವ ಅರ್ಜಿಯಲ್ಲಿ, Online Betting ಅನ್ನು ಜೂಜಾಟವೆಂದು ಪರಿಗಣಿಸಿ ನಿಷೇಧಿಸಬೇಕು ಎಂದು ಒತ್ತಾಯಿಸಲಾಗಿದೆ. ಸೆಲೆಬ್ರಿಟಿಗಳು ಈ ಆ್ಯಪ್‌ಗಳ ಪ್ರಚಾರ ಮಾಡುತ್ತಿದ್ದಾರೆ, ಇದರಿಂದ ಜನರು ಹಣ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಅರ್ಜಿದಾರರು ಬಲವಾದ ಬೇಡಿಕೆಗಳನ್ನು ಮುಡಿಪಾಗಿಟ್ಟಿದ್ದು, ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಿಂದ ಈ ಆ್ಯಪ್‌ಗಳನ್ನು ತೆಗೆಯಬೇಕು, ಜಾಹೀರಾತು ನಿಲ್ಲಿಸಬೇಕು ಮತ್ತು ಸೆಲೆಬ್ರಿಟಿಗಳ ಪ್ರಚಾರ ತಕ್ಷಣ ನಿಲ್ಲಿಸಬೇಕು ಎಂಬ ಮಧ್ಯಂತರ ಆದೇಶಕ್ಕಾಗಿ ಮನವಿ ಮಾಡಿದರು. ನ್ಯಾಯಾಲಯ ಮುಂದಿನ ವಿಚಾರಣೆಯಲ್ಲಿ ಈ ಎಲ್ಲ ವಿಚಾರಗಳನ್ನು ಪರಿಗಣಿಸುವುದಾಗಿ ಹೇಳಿದೆ.