Chennai, Tamilnadu : ಕಳೆದ ಕೆಲ ವಾರಗಳಿಂದ ತರಕಾರಿ ಬೆಲೆ ಒಂದೇ ಸಮನೆ ಆಕಾಶಕ್ಕೆ ಏರುತ್ತಿದೆ. ವಿಪರೀತ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಟೊಮೆಟೋ ದರ ಕೂಡ ಶತಕದ ಗಡಿ ದಾಟಿದ್ದು, ಅನೇಕರು ಟೊಮೆಟೋ ಬಳಸದೆಯೇ ಅಡುಗೆ ಮಾಡುವ ನಿಟ್ಟಿನಲ್ಲಿ ಯೋಚನೆ ಮಾಡುತ್ತಿದ್ದಾರೆ. ಟೊಮೆಟೋ ದರ ಗಗನಕ್ಕೇರುತ್ತಿರುವ (Tomato Price Hike) ಹೊತ್ತಿನಲ್ಲೇ ಟೊಮೆಟೋ ಖರೀದಿಸುವ ಗ್ರಾಹಕರಿಗೆ ಚೆನ್ನೈನಲ್ಲಿ ತಮಿಳುನಾಡು ಸರ್ಕಾರ ಹೊಸತೊಂದು ಐಡಿಯಾವನ್ನು ಜಾರಿ ತರಲಾಗಿದೆ.
ಇಂದಿನಿಂದ ಚೆನ್ನೈ ನಿವಾಸಿಗಳು ತಮ್ಮ ಪಡಿತರ ಅಂಗಡಿಗಳಲ್ಲಿ (Ration Shops) ಕಡಿಮೆ ಬೆಲೆಗೆ ಟೊಮೆಟೋವನ್ನು ಖರೀದಿಸಬಹುದಾಗಿದೆ. ಸಾಮಾನ್ಯವಾಗಿ ಚೆನ್ನೈನ ಇತರ ಅಂಗಡಿಗಳಲ್ಲಿ ಸದ್ಯ ಟೊಮೆಟೋ ಕೆಜಿ ಒಂದಕ್ಕೆ 100-130 ರೂಪಾಯಿ ಇದೆ. ಆದರೆ ಪಡಿತರ ಅಂಗಡಿಗಳಲ್ಲಿ ಕಡಿಮೆ ದರದಲ್ಲಿ ಟೊಮೆಟೋ ಸಿಗಲಿದ್ದು, ಕೆಜಿ ಒಂದಕ್ಕೆ 60 ರೂಪಾಯಿ ನಿಗದಿ ಪಡಿಸಲಾಗಿದೆ.
ಸಹಕಾರಿ ಸಚಿವ ಕೆಆರ್ ಪೆರಿಯಕುರುಪ್ಪನ್ (K R Periyakuruppan) ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ತಮಿಳುನಾಡು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.ಮಂಗಳವಾರದಿಂದ ನಗರದಾದ್ಯಂತ 82 ಸಾರ್ವಜನಿಕ ವಿತರಣಾ ಅಂಗಡಿಗಳು (ಪಿಡಿಎಸ್) ಅಥವಾ ಪಡಿತರ ಅಂಗಡಿಗಳಲ್ಲಿ ಟೊಮೆಟೋ ಕೆಜಿಗೆ 60 ರೂ.ಗೆ ಮಾರಾಟವಾಗಲಿದೆ.ಮುಂದಿನ ದಿನಗಳಲ್ಲಿ ಚೆನ್ನೈ ಹೊರತುಪಡಿಸಿ ಇತರ ಜಿಲ್ಲೆಗಳ ಎಲ್ಲಾ ಪಡಿತರ ಅಂಗಡಿಗಳಲ್ಲಿ ಟೊಮೇಟೊ ಮಾರಾಟ ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದು ದೇಶಾದ್ಯಂತ ಟೊಮೆಟೋ ಬೆಲೆ ಹೆಚ್ಚಾದ ಹಿನ್ನೆಲೆಯಲ್ಲಿ ರೈತರಿಂದ ನೇರವಾಗಿ ಟೊಮೆಟೋ ಖರೀದಿಸಿ ಮಾರುಕಟ್ಟೆಯ ಅರ್ಧದಷ್ಟು ಬೆಲೆಗೆ ಮಾರಾಟ ಮಾಡಲು ಕ್ರಮಕೈಗೊಳ್ಳುತ್ತಿದ್ದೇವೆ ಎಂದು ಹೇಳುತ್ತಾರೆ.