Quetta: ಪಾಕಿಸ್ತಾನದ (Pakistan) ಬಲೂಚಿಸ್ತಾನದ ಸುರಂಗ ಮಾರ್ಗದಲ್ಲಿ ಬಲೂಚಿ ಬಂಡುಕೋರರು ಮಂಗಳವಾರ ಮಧ್ಯಾಹ್ನ ಪ್ರಯಾಣಿಕ ರೈಲನ್ನು ಹೈಜಾಕ್ ಮಾಡಿದರು. ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 16 ಉಗ್ರರನ್ನು ಹತ್ಯೆ ಮಾಡಲಾಗಿದ್ದು, 104 ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
Zafar Express ರೈಲು 400 ಪ್ರಯಾಣಿಕರೊಂದಿಗೆ ಕ್ವೆಟ್ಟಾದಿಂದ ಪೇಶಾವರ್‌ಗೆ ತೆರಳುತ್ತಿತ್ತು. ಈ ವೇಳೆ ಗುಡಲರ್ ಮತ್ತು ಪಿರು ಕುನ್ರಿ ಸುರಂಗ ಮಾರ್ಗದಲ್ಲಿ ಶಸ್ತ್ರಸಜ್ಜಿತ ಉಗ್ರರು ರೈಲಿಗೆ ತಡೆಯೊಡ್ಡಿ ದಾಳಿ ನಡೆಸಿದರು. ಬಲೂಚಿಸ್ತಾನ ಲಿಬರೇಶನ್ ಆರ್ಮಿ ಈ ದಾಳಿಯ ಹೊಣೆ ಹೊತ್ತಿದೆ.
ಸದ್ಯ ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಭದ್ರತಾ ಪಡೆಗಳು ರೈಲು ಸುರಂಗವನ್ನು ಸುತ್ತುವರೆದಿವೆ. ಈಗಾಗಲೇ 104 ಪ್ರಯಾಣಿಕರನ್ನು ರಕ್ಷಿಸಿದ್ದು, ಮಹಿಳೆಯರು ಮತ್ತು ಮಕ್ಕಳು ಕೂಡ ಇದ್ದಾರೆ. 16 ಉಗ್ರರನ್ನು ಹತ್ಯೆ ಮಾಡಲಾಗಿದೆ ಮತ್ತು ಹಲವರು ಗಾಯಗೊಂಡಿದ್ದಾರೆ.
ಉಗ್ರರು ಕೆಲವು ಪ್ರಯಾಣಿಕರನ್ನು ಪರ್ವತ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ ಎನ್ನಲಾಗಿದ್ದು, ಭದ್ರತಾ ಪಡೆಗಳು ನಿರಂತರ ಕಾರ್ಯಾಚರಣೆ ನಡೆಸಿವೆ. ಈ ನಡುವೆ 58 ಪ್ರಯಾಣಿಕರನ್ನು, ಅಂದರೆ 31 ಮಹಿಳೆಯರು ಮತ್ತು 15 ಮಕ್ಕಳು ಸೇರಿ, ಮತ್ತೊಂದು ರೈಲಿನಲ್ಲಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.
ಸಂಕಷ್ಟದಲ್ಲಿರುವ ಪ್ರಯಾಣಿಕರ ಕುಟುಂಬಸ್ಥರು ಮಾಹಿತಿ ಪಡೆಯಲು ರೈಲು ನಿಲ್ದಾಣಗಳಲ್ಲಿ ತುರ್ತು ಸಹಾಯವಾಣಿ ಸ್ಥಾಪಿಸಲಾಗಿದೆ. ಪಾಕಿಸ್ತಾನ ಮಾಧ್ಯಮಗಳ ಪ್ರಕಾರ, ದಾಳಿಯ ಸಂದರ್ಭದಲ್ಲಿ ಭಾರೀ ಸ್ಫೋಟಗಳು ಮತ್ತು ಗುಂಡಿನ ಚಕಮಕಿ ನಡೆದಿದ್ದು, ಜನರು ಸಾಮಾಜಿಕ ಜಾಲತಾಣಗಳ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.