ಅಮೆರಿಕದ ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾಗಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಸ್ನೇಹಿತ ಮತ್ತು ಕರ್ನರ್ವೇಟಿವ್ ಕಾರ್ಯಕರ್ತ ಚಾರ್ಲಿ ಕಿರ್ಕ್ (Charlie Kirk) (31) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕುತ್ತಿಗೆಗೆ ಗುಂಡು ತಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕಿರ್ಕ್ ಅವರ ಸಾವಿನ ಸುದ್ದಿ ತಿಳಿಸಿ, ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಆಘಾತ ವ್ಯಕ್ತಪಡಿಸಿದ್ದಾರೆ. “ಚಾರ್ಲಿ ಎಲ್ಲರಿಂದಲೂ ಪ್ರೀತಿಸಲ್ಪಟ್ಟವರು. ಯುವಕರ ಹೃದಯವನ್ನು ಅರ್ಥಮಾಡಿಕೊಳ್ಳುವ ಶಕ್ತಿ ಅವರಿಗೆ ಇತ್ತು. ಅವರಿಗಾಗಿ ಪ್ರಾರ್ಥಿಸೋಣ” ಎಂದು ಟ್ರಂಪ್ ಬರೆದಿದ್ದಾರೆ. ತಮ್ಮ ಪತ್ನಿ ಮೆಲಾನಿಯಾದೊಂದಿಗೆ ಕಿರ್ಕ್ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಇದಲ್ಲದೆ, ಅಮೆರಿಕದಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲು ಆದೇಶಿಸಿದ್ದಾರೆ.
ಈ ದಾಳಿಯ ಹಿಂದೆ ಯಾರು ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಉತಾಹ್ ವಿಶ್ವವಿದ್ಯಾಲಯ, ಓರೆಮ್ ಪೊಲೀಸ್, ಎಫ್ಬಿಐ ಹಾಗೂ ಇತರೆ ಇಲಾಖೆಗಳು ಶೋಧ ಕಾರ್ಯದಲ್ಲಿ ತೊಡಗಿವೆ. ಇನ್ನೂ ಯಾರನ್ನೂ ಬಂಧಿಸಿಲ್ಲ. FBI ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಂಸ್ಥೆಯ ನಿರ್ದೇಶಕ ಕಾಶ್ ಪಟೇಲ್ ತಿಳಿಸಿದ್ದಾರೆ.
ಕಿರ್ಕ್ ಅವರು ಮಾಧ್ಯಮ ಕ್ಷೇತ್ರದ ಪ್ರಮುಖ ಉದ್ಯಮಿ. ಅವರ ಆಸ್ತಿ ಮೌಲ್ಯ ಸುಮಾರು 12 ಮಿಲಿಯನ್ ಡಾಲರ್ ಎಂದು ಹೇಳಲಾಗುತ್ತದೆ. ಮಾಧ್ಯಮ ಶೋಗಳು, ರಿಯಲ್ ಎಸ್ಟೇಟ್ ಉದ್ಯಮಗಳು ಹಾಗೂ ಇತರ ಮೂಲಗಳಿಂದ ಅವರು ಸಂಪತ್ತು ಗಳಿಸಿದ್ದರು.
ಈ ದಾಳಿ ಅಮೆರಿಕದಲ್ಲಿ ಗನ್ ಸಂಸ್ಕೃತಿ ಕುರಿತ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ರಾಜಕೀಯ ಹಿಂಸಾಚಾರಗಳು ಏರಿಕೆಯಾಗುತ್ತಿವೆ ಎಂಬ ಭೀತಿ ಜನರಲ್ಲಿ ಮೂಡಿದೆ.








