New York: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ತಮ್ಮ ಆಪ್ತ, ಭಾರತೀಯ ಮೂಲದ ಕಶ್ಯಪ್ ‘ಕಾಶ್’ ಪಟೇಲ್‌ರನ್ನು (Kash Patel) ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (Federal Bureau of Investigation FBI) ಮುಖ್ಯಸ್ಥರ ಪ್ರಬಲ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದಾರೆ.
ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಷಿಯಲ್ ನಲ್ಲಿ, “ಕಾಶ್ ಪಟೇಲ್ ಅವರು ನನ್ನ ಆಡಳಿತದಲ್ಲಿ ಪ್ರಾಮುಖ್ಯ ಪಾತ್ರ ವಹಿಸಿದ್ದರು. ಅವರು ಅಮೆರಿಕಾ ಫಸ್ಟ್ ಹೋರಾಟಗಾರರು, ಭ್ರಷ್ಟಾಚಾರವನ್ನು ಬಹಿರಂಗಪಡಿಸಿ, ನ್ಯಾಯವನ್ನು ರಕ್ಷಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ‘ರಷ್ಯಾ ವಂಚನೆ’ ಯಂತಹ ಪ್ರಕರಣಗಳಲ್ಲಿ ಪಟೇಲ್ ಪ್ರಮುಖ ಪಾತ್ರ ವಹಿಸಿದ್ದರು,” ಎಂದು ತಿಳಿಸಿದ್ದಾರೆ.
44 ವರ್ಷದ ಕಾಶ್ ಪಟೇಲ್ ಅವರು 2017ರಲ್ಲಿ ಟ್ರಂಪ್ ಆಡಳಿತದ ಕೊನೆಯ ದಿನಗಳಲ್ಲಿ ಯುನೈಟೆಡ್ ಸ್ಟೇಟ್ಸ್ ರಕ್ಷಣಾ ಕಾರ್ಯದರ್ಶಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಅವರ ಕುಟುಂಬ ಗುಜರಾತ್ ಮೂಲದವರು. ಪಟೇಲ್ ಅವರ ಪೋಷಕರು ಪೂರ್ವ ಆಫ್ರಿಕಾದ ತಾಂಜಾನಿಯಾ ಮತ್ತು ಉಗಾಂಡಾದಿಂದ ಅಮೆರಿಕೆಗೆ ವಲಸೆ ಬಂದಿದ್ದರು. 1970ರ ದಶಕದಲ್ಲಿ ಕೆನಡಾದ ಮೂಲಕ ಅಮೆರಿಕಕ್ಕೆ ಬಂದ ಕುಟುಂಬವು ನ್ಯೂಯಾರ್ಕ್ ನಲ್ಲಿ ನೆಲೆಸಿತು.
ಪಟೇಲ್ ಈಗ ನಿವೃತ್ತರಾದ ಪೋಷಕರೊಂದಿಗೆ ಅಮೆರಿಕಾ ಮತ್ತು ಗುಜರಾತ್ ಎರಡರಲ್ಲೂ ಸಮಯ ಕಳೆಯುತ್ತಿದ್ದಾರೆ.