Washington: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಮತ್ತೊಂದು ಸುಂಕ ದಾಳಿ ನಡೆಸಿದ್ದಾರೆ. ಅಮೆರಿಕಕ್ಕೆ ರಫ್ತು ಮಾಡುವ ಎಲ್ಲಾ ಬ್ರ್ಯಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಿಗಳ ಮೇಲೆ ಶೇ.100 ತೆರಿಗೆ ವಿಧಿಸಲಾಗುತ್ತಿದೆ. ಈ ಸುಂಕವು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಆದರೆ, ಅಮೆರಿಕದಲ್ಲಿ ಔಷಧ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದ ಕಂಪನಿಗಳು ಈ ಸುಂಕದಿಂದ ಪ್ರಭಾವಿತವಾಗುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್‌ನಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಅವರು ಅಡುಗೆಮನೆ ಕ್ಯಾಬಿನೆಟ್ ಗಳು, ಸ್ನಾನಗೃಹದ ವ್ಯಾನಿಟಿಗಳು ಮತ್ತು ಸಂಬಂಧಿತ ವಸ್ತುಗಳ ಮೇಲೆ ಶೇ.50, ಭಾರೀ ಟ್ರಕ್‌ಗಳ ಮೇಲೆ ಶೇ.25 ಸುಂಕವನ್ನು ವಿಧಿಸಿರುವುದು ತಿಳಿಸಿದರು. ಇತ್ತೀಚೆಗಷ್ಟೇ ಆಮದು ಶುಲ್ಕ ಶೇ.25ರಿಂದ ಶೇ.50ಕ್ಕೆ ಏರಿಸಲ್ಪಟ್ಟಿತ್ತು.
US ನಲ್ಲಿ ಔಷಧ ಉತ್ಪಾದನಾ ಘಟಕಗಳ ನಿರ್ಮಾಣ ಈಗಾಗಲೇ ಪ್ರಾರಂಭವಾಗಿದ್ದರೂ, ಕಂಪನಿಗಳಿಗೆ ಸುಂಕ ಪರಿಹಾರ ಲಭ್ಯವಿದೆ ಎಂದು ಅವರು ವಿವರಿಸಿದರು. ಭಾರತದ ಮೇಲಿನ ಸುಂಕದ ಪರಿಣಾಮವಾಗಿ, SBI ಸಂಶೋಧನಾ ವರದಿಯ ಪ್ರಕಾರ, ಶೇ.50 ಸುಂಕ ವಿಧಿಸಿದರೆ 2026 ರ ಆರ್ಥಿಕ ವರ್ಷದಲ್ಲಿ ಭಾರತೀಯ ಕಂಪನಿಗಳ ಆದಾಯ ಶೇ.5-10 ರಷ್ಟು ಕಡಿಮೆಯಾಗಬಹುದು.
ಈ ಸುಂಕ ಭಾರತೀಯ ಔಷಧ ಕಂಪನಿಗಳಿಗೆ ದೊಡ್ಡ ಹಿನ್ನಡೆಯಾಗಬಹುದು. ಅಮೆರಿಕ ಭಾರತದ ಪ್ರಮುಖ ಔಷಧ ರಫ್ತು ಮಾರುಕಟ್ಟೆಯಾಗಿದೆ, ಮತ್ತು ಅಲ್ಲಿ ಜೆನೆರಿಕ್ ಔಷಧಿಗಳಿಗೆ ಭಾರಿ ಬೇಡಿಕೆಯಿದೆ. 2024 ರಲ್ಲಿ ಭಾರತವು ಅಮೆರಿಕಕ್ಕೆ 3.6 ಬಿಲಿಯನ್ ಡಾಲರ್ ಮೌಲ್ಯದ ಔಷಧಿಗಳನ್ನು ರಫ್ತು ಮಾಡಿತ್ತು. 2025 ರ ಮೊದಲಾರ್ಧದಲ್ಲಿ ಈ ಅಂಕಿ 3.7 ಬಿಲಿಯನ್ ಡಾಲರ್ ತಲುಪಿತು.
ಡಾ. ರೆಡ್ಡೀಸ್ ಲ್ಯಾಬೋರೇಟರೀಸ್, ಸನ್ ಫಾರ್ಮಾ, ಲುಪಿನ್ ಮತ್ತು ಅರಬಿಂದೋ ಫಾರ್ಮಾ ಸೇರಿದಂತೆ ಪ್ರಮುಖ ಭಾರತೀಯ ಕಂಪನಿಗಳು ಅಮೆರಿಕ ಮಾರುಕಟ್ಟೆಗೆ ಹೆಚ್ಚು ಅವಲಂಬಿತವಾಗಿವೆ. ಈ ಸುಂಕಗಳು ಅವುಗಳ ವೆಚ್ಚವನ್ನು ದ್ವಿಗುಣಗೊಳಿಸಬಹುದು.







