ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಇತ್ತೀಚೆಗಷ್ಟೆ 12ಕ್ಕೂ ಹೆಚ್ಚು ದೇಶಗಳ ನಾಯಕರಿಗೆ ತಮ್ಮ ಸುಂಕ (tariff) ಯೋಜನೆ ಕುರಿತು ಪತ್ರ ಬರೆದು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಮೂಲತಃ ಜುಲೈ 9ರಂದು ಕೊನೆಗೊಳ್ಳಬೇಕಿದ್ದ ರೆಸಿಪ್ರೋಕಲ್ ಸುಂಕದ ಜಾರಿಗೆ ಗಡುವನ್ನು ಈಗ ಆಗಸ್ಟ್ 1ರ ವರೆಗೆ ಮುಂದೂಡಲಾಗಿದೆ.
ಟ್ರಂಪ್ ಏಪ್ರಿಲ್ 2ರಂದು ಭಾರತ ಸೇರಿದಂತೆ ಹಲವಾರು ದೇಶಗಳ ಮೇಲೆ ಶೇಕಡಾ 26ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ್ದರು. ಆದರೆ ಈ ನಿರ್ಧಾರವನ್ನು ತಾತ್ಕಾಲಿಕವಾಗಿ 90 ದಿನಗಳವರೆಗೆ ಸ್ಥಗಿತಗೊಳಿಸಲಾಗಿತ್ತು, ಇದರಿಂದ ದೇಶಗಳು ಪರಸ್ಪರ ಸಮಜಾಯಿಷಿ ಮಾಡಿಕೊಂಡು ವ್ಯಾಪಾರ ಒಪ್ಪಂದಕ್ಕೆ ಬರಬಹುದಿತ್ತು.
ಈ ಮಧ್ಯೆ, ಟ್ರಂಪ್ ತಮ್ಮ ಕಾರ್ಯನಿರ್ವಾಹಕ ಆದೇಶ (Executive Order 14266) ಮೂಲಕ ಈ ತಾತ್ಕಾಲಿಕ ಅಮಾನತು ಆದೇಶವನ್ನು ಆಗಸ್ಟ್ 1, 2025ರ ವರೆಗೆ ವಿಸ್ತರಿಸಲು ನಿರ್ಧರಿಸಿದ್ದಾರೆ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.
ಈ ವಿಸ್ತರಣೆ ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಸಮಯ ಒದಗಿಸುತ್ತದೆ. ಈಗಾಗಲೇ ಮಾತುಕತೆಗಳ ಬಹುತೇಕ ಹಂತ ಮುಗಿದಿದ್ದು, ಶರತ್ಕಾಲದಲ್ಲಿ (ಸೆಪ್ಟೆಂಬರ್-ಅಕ್ಟೋಬರ್) ಮೊದಲ ಹಂತದ ಒಪ್ಪಂದ ಸಿದ್ಧಗೊಳ್ಳುವ ನಿರೀಕ್ಷೆಯಿದೆ.
ಟ್ರಂಪ್ ಇನ್ನೂ ಯುರೋಪಿಯನ್ ಒಕ್ಕೂಟ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಮ್ಯಾನ್ಮಾರ್, ದಕ್ಷಿಣ ಆಫ್ರಿಕಾ, ಮಲೇಷ್ಯಾ ಮತ್ತು ಕಝಾಕಿಸ್ತಾನ್ ಮೊದಲಾದ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಜಪಾನ್ ಮತ್ತು ದಕ್ಷಿಣ ಕೊರಿಯಾ ಮೇಲೂ ಶೇಕಡಾ 25ರಷ್ಟು ತೆರಿಗೆ ವಿಧಿಸಲಾಗಿದ್ದು, ಹೊಸ ಸುಂಕಗಳು ಆಗಸ್ಟ್ 1ರಿಂದ ಜಾರಿಗೆ ಬರಲಿವೆ.
ಭಾರತವು ಈಗಾಗಲೇ ತನ್ನ ನಿಲುವು ತಿಳಿಸಿರುವುದರಿಂದ, ಮುಂದಿನ ಹೆಜ್ಜೆ ಅಮೆರಿಕದ ಕೈಯಲ್ಲಿದೆ. ಪ್ರಸ್ತುತ, ಅಮೆರಿಕ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ.