Tumkur (Tumakuru) : ಕರ್ನಾಟಕ ಅಗ್ನಿಬನ್ನಿರಾಯ ತಿಗಳ ಮಹಾಸಭಾ ವತಿಯಿಂದ ತಿಗಳ ಸಮುದಾಯದ ಮೂಲಪುರುಷ ಅಗ್ನಿ ಬನ್ನಿರಾಯಸ್ವಾಮಿ ಜಯಂತಿಯನ್ನು (Agni Banniraya Swamy Jayanthi) ತುಮಕೂರಿನಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ” ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಚರ್ಚಿಸಿ ಅಗ್ನಿ ಬನ್ನಿರಾಯಸ್ವಾಮಿ ದೇವಾಲಯ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ತಾಲ್ಲೂಕಿನ ಕುಂದೂರು ಬಳಿ 1 ಎಕರೆ 9 ಗುಂಟೆ ಸರ್ಕಾರಿ ಜಾಗ ಮಂಜೂರು ಮಾಡಿಸಿಕೊಡಲು ಪೂರ್ಣ ಪ್ರಮಾಣದಲ್ಲಿ ಸಹಕಾರ ಕೊಡುತ್ತೇನೆ. ಒಂದೇ ತಾಯಿ ಮಕ್ಕಳಂತೆ ಎಲ್ಲಾ ಸಮುದಾಯ, ವರ್ಗದ ಜನರು ಒಟ್ಟಾಗಿ ಬದುಕಬೇಕಿದೆ. ತಿಗಳ ಸಮುದಾಯದವರು ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಬರಬೇಕಾದರೆ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ತಿಗಳ ಸಮುದಾಯದ ಆರಾಧ್ಯ ದೈವ ಅಗ್ನಿ ಬನ್ನಿರಾಯಸ್ವಾಮಿ ದೇವಾಲಯ, ದಾಸೋಹ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ ₹25 ಲಕ್ಷ ನೀಡುತ್ತೇನೆ” ಎಂದು ತಿಳಿಸಿದರು.

ಜಯಂತ್ಯುತ್ಸವದ ಪ್ರಯುಕ್ತ ಅಗ್ನಿ ಬನ್ನಿರಾಯಸ್ವಾಮಿ ಮೆರವಣಿಗೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾಸ್ವಾಮಿ ಚಾಲನೆ ನೀಡಿದರು. ಬಿಜಿಎಸ್ ವೃತ್ತದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಮಾವೇಶ ನಡೆಯುತ್ತಿದ್ದ ಗಾಜಿನ ಮನೆಗೆ ಬಂದು ಸೇರಿತು. ಹಳದಿ ಬಣ್ಣದ ಬಾವುಟಗಳು ಮೆರವಣಿಗೆಯಲ್ಲಿ ರಾರಾಜಿಸಿದವು. ಸಾವಿರಾರು ಜನರು ಭಾಗವಹಿಸಿದ್ದರು.
ತುರುವೇಕೆರೆ ತಾಲ್ಲೂಕು ಅಣಪ್ಪನಹಳ್ಳಿ ಆಲ್ಬೂರು ಶನೇಶ್ವರ ಮಠದ ಸೋಮಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮೀಶ, ಮುಖಂಡ ಸೊಗಡು ಶಿವಣ್ಣ, ರಾಜ್ಯ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಉದಯ್ ಸಿಂಗ್, ರಾಜ್ಯ ತಿಗಳ ಮಹಾಸಭಾ ಅಧ್ಯಕ್ಷರಾದ ಸುಬ್ಬಣ್ಣ, ಆಂಜನೇಯ, ಜಿಲ್ಲಾ ಗೆಳೆಯರ ಬಳಗದ ಅಧ್ಯಕ್ಷ ಎನ್.ಗೋವಿಂದರಾಜು, ಸಮುದಾಯದ ಮುಖಂಡರಾದ ಕೆ.ಜಿ.ಕೃಷ್ಣಮೂರ್ತಿ, ಎಂ.ಬಿ.ಕೃಷ್ಣಯ್ಯ, ಲಲಿತಾ ರವೀಶ್, ಶಶಿಕಲಾ ಗಂಗಹನುಮಯ್ಯ, ಟಿ.ಕೆ.ನರಸಿಂಹಮೂರ್ತಿ, ಶ್ರೀನಿವಾಸ್, ಯಜಮಾನರಾದ ಟಿ.ಎಚ್.ಹನುಮಂತರಾಜು, ಟಿ.ಎಸ್.ಶಿವಕುಮಾರ್, ದಾಸೇಗೌಡ, ಕೃಷ್ಣಪ್ಪ, ಮಂಜಣ್ಣ, ಗಂಗಹನುಮಯ್ಯ, ಎಸ್.ನಾಗಣ್ಣ, ಜಗದೀಶ್, ಕುಂಬಯ್ಯ ಮತ್ತಿತರರು ಉಪಸ್ಥಿತರಿದ್ದರು.