Russia ರಷ್ಯಾ ದಿಂದ ಯುದ್ಧಕ್ಕೆ (War) ಗುರಿಯಾಗಿರುವ ಉಕ್ರೇನ್ (Ukraine) ನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು (Indian Students) ಒತ್ತೆಯಾಳುಗಳನ್ನಾಗಿ (Hostage) ಇರಿಸಿಕೊಳ್ಳಲಾಗಿದೆ ಎಂಬ ವರದಿಯು ನಿರಾಧಾರ. ಭಾರತೀಯ ವಿದ್ಯಾರ್ಥಿಗಳ ಜತೆ ರಾಯಭಾರ ಕಚೇರಿ ನಿರಂತರ ಸಂಪರ್ಕದಲ್ಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಉಕ್ರೇನ್ ಪಡೆಗಳು ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳಗಿ ಇರಿಸಿಕೊಂಡಿದೆ ಎಂದು ರಷ್ಯಾ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈ ಸ್ಪಷ್ಟನೆ ನೀಡಿದೆ.
ಯಾವುದೇ ಭಾರತೀಯ ವಿದ್ಯಾರ್ಥಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವ ಮಾಹಿತಿ ನಮ್ಮ ಗಮನಕ್ಕೆ ಬಂದಿಲ್ಲ. ಯುದ್ಧ ಪ್ರದೇಶದಲ್ಲಿರುವ ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕಾಗಿ ವಿಶೇಷ ರೈಲಿನ ವ್ಯವಸ್ಥೆ ಕಲ್ಪಿಸುವಂತೆ ಉಕ್ರೇನ್ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಪೂರ್ವ ಭಾಗದಲ್ಲಿರುವವರನ್ನು ಸುರಕ್ಷಿತವಾಗಿ ಪಶ್ಚಿಮ ಭಾಗಕ್ಕೆ ರವಾನಿಸುವಂತೆ ಸೂಚಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
ಖಾರ್ಕಿವ್ ನಗರದಲ್ಲಿ ಭಾರತೀಯರ ಗುಂಪೊಂದನ್ನು ಉಕ್ರೇನ್ ಸೈನಿಕರು ತಮ್ಮ ವಶದಲ್ಲಿ ಇರಿಸಿಕೊಂಡಿದ್ದಾರೆ. ಇವರನ್ನು ಒತ್ತೆಯಿಂದ ಬಿಡಿಸಿ ಸ್ವದೇಶಕ್ಕೆ ಕಳುಹಿಸಲು ರಷ್ಯಾ ಸೇನೆ ಮುಂದಾಗಿದೆ ಎಂದು ರಷ್ಯಾ ಹೇಳಿರುವುದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದರು.
ಉಕ್ರೇನ್ ಪೂರ್ವ ಭಾಗದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತ ಪ್ರದೇಶಕ್ಕೆ ಹೋಗಲು ರಷ್ಯಾ ಅನುವು ಮಾಡಿಕೊಡಬೇಕು ಎಂದು ಕೋರಿ ಪ್ರಧಾನಿ ನೇರಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ ಬುಧವಾರ ಸಂವಾದ ನಡೆಸಿದರು. ಇದಕ್ಕೆ ಪುಟಿನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.