ಬೆಂಗಳೂರು: ರಾಜ್ಯದ ಅನಧಿಕೃತ ಬಡಾವಣೆಗಳನ್ನು ತಡೆಹಿಡಿಯಲು ಕಠಿಣ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಸ್ಪಷ್ಟ ಸೂಚನೆ ನೀಡಿದ್ದಾರೆ. ಅನಧಿಕೃತ ಬಡಾವಣೆಗಳಿಂದ ಕಂದಾಯ ನಷ್ಟವಾಗುವುದರ ಜೊತೆಗೆ ನಾಗರಿಕ ಸೌಕರ್ಯಗಳ ಕೊರತೆ ಉಂಟಾಗುತ್ತಿದೆ. ಇದನ್ನು ತಡೆಗಟ್ಟಲು ಎಲ್ಲಾ ಅಧಿಕಾರಿಗಳಿಗೆ ಸೂಕ್ತ ಮಾರ್ಗಸೂಚಿ ನೀಡಲಾಗಿದೆ.
ಸಿದ್ದರಾಮಯ್ಯ ಅವರು ಮಂಗಳವಾರ ಮಹಾನಗರಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಪೌರಾಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಯೋಜನಾ ನಿರ್ದೇಶಕರೊಂದಿಗೆ ವಿಡಿಯೊ ಸಂವಾದ ನಡೆಸಿ, ಇ-ಖಾತಾ ಜಾರಿಗೆ ತರಲು ಆದೇಶಿಸಿದರು.
ಮುಖ್ಯಮಂತ್ರಿಯವರು ಅನಧಿಕೃತ ಬಡಾವಣೆಗಳಿಗೆ ಕಾಯ್ದೆ ಮೂಲಕ ಅಂತ್ಯಹಾಕಲು ಸೂಚಿಸಿದರು. ಬಿ-ಖಾತಾ ನೀಡುವ ಅವಕಾಶವನ್ನು ಈ ಬಾರಿ ಮಾತ್ರ ನೀಡಲಾಗುವುದು, ಅದಾದ ಬಳಿಕ ಯಾವುದೇ ಅನಧಿಕೃತ ಬಡಾವಣೆ ತಲೆ ಎತ್ತಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಈ ಕಾರ್ಯವನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ನಿಯಮ ಉಲ್ಲಂಘನೆಯಾಗಿದರೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು, ನಗರ ಯೋಜನಾ ಅಧಿಕಾರಿಗಳು ಹಾಗೂ ಮುಖ್ಯ ಅಧಿಕಾರಿಗಳು ಜವಾಬ್ದಾರರಾಗಬೇಕಾಗುತ್ತದೆ. ಮಧ್ಯವರ್ತಿಗಳು ಹಾಗೂ ಬ್ರೋಕರ್‌ಗಳಿಗೆ ಯಾವುದೇ ಅವಕಾಶ ನೀಡಬಾರದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಅನಧಿಕೃತ ಬಡಾವಣೆಗಳಲ್ಲಿ ಮನೆ ಹೊಂದಿರುವ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಪರಿಹಾರ ನೀಡಲು ಈಗಾಗಲೇ ಒಮ್ಮತವಾಗಿದೆ. ಆದರೆ, ಹೊಸ ಅನಧಿಕೃತ ಬಡಾವಣೆಗಳಿಗೆ ಅವಕಾಶ ನೀಡಲಾಗುವುದಿಲ್ಲ. ಈ ನಿರ್ಧಾರವನ್ನು ತಕ್ಷಣದಿಂದಲೇ ಜಾರಿಗೆ ತರಲು ಸೂಚಿಸಿದರು.
ಈ ಸಂವಾದದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಂ ಖಾನ್, ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವರು ಭಾಗವಹಿಸಿದರು.