
Jerusalem: ಅಮೆರಿಕವು ತಾತ್ಕಾಲಿಕ ನಿಷೇಧವನ್ನು ತೆಗೆದುಹಾಕಿದ ಬಳಿಕ, 907 ಕೆಜಿ ತೂಕದ ಎಂಕೆ-84 ಬಾಂಬುಗಳನ್ನು ಇಸ್ರೇಲ್ ಗೆ (Israel) ಪೂರೈಸಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯ ತಿಳಿಸಿದೆ. ಈ ಬಾಂಬುಗಳು ಬಲವಾದ ಸ್ಫೋಟ ಶಕ್ತಿಯೊಂದಿಗೆ ಗುರಿಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿವೆ.
ಈ ಶಸ್ತ್ರಾಸ್ತ್ರಗಳನ್ನು ಹೊತ್ತ ಹಡಗು ಶನಿವಾರ ತಡರಾತ್ರಿ ಇಸ್ರೇಲಿನ ಅಶ್ದೋಡ್ ಬಂದರಿಗೆ ತಲುಪಿದ್ದು, ರಾತ್ರಿಯಿಡೀ ಅವುಗಳನ್ನು ಇಳಿಸಲಾಯಿತು. ಬಾಂಬುಗಳನ್ನು ಇಸ್ರೇಲಿ ವಾಯುಪಡೆಗೆ ಸಾಗಿಸಲಾಯಿತು ಎಂದು ಸಚಿವಾಲಯ ಹೇಳಿದೆ.
ಈ ಬಾಂಬುಗಳ ಬಳಕೆಯಿಂದ ಗಾಜಾ ಪಟ್ಟಿಯಲ್ಲಿ ಸಂಭವಿಸಬಹುದಾದ ಹಾನಿಯನ್ನು ತಡೆಯಲು ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತ ಅವಧಿಯಲ್ಲಿ ಪೂರೈಕೆ ಸ್ಥಗಿತಗೊಳ್ಳಿತ್ತು. ಆದರೆ, ಈಗ ಮತ್ತೆ ಪೂರೈಕೆ ಆರಂಭವಾಗಿದ್ದು, ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಆಡಳಿತಕ್ಕೆ ಧನ್ಯವಾದ ತಿಳಿಸಿದ್ದಾರೆ.
ಫೆಬ್ರವರಿ 18ರೊಳಗೆ ಇಸ್ರೇಲಿ ಪಡೆಗಳು ಲೆಬನಾನ್ ಭೂಪ್ರದೇಶದಿಂದ ಸಂಪೂರ್ಣವಾಗಿ ಹಿಂದೆ ಸರಿಯಬೇಕು ಎಂದು ಹಿಜ್ಬುಲ್ಲಾ ಮುಖ್ಯಸ್ಥರು ತಿಳಿಸಿದ್ದಾರೆ. ವಾಷಿಂಗ್ಟನ್ ಮಧ್ಯಸ್ಥಿಕೆಯಿಂದ ಲೆಬನಾನ್ ನಲ್ಲಿ ಕದನ ವಿರಾಮ ಮಾಡಲಾಗಿದ್ದು, ಈ ಗಡುವು ಫೆಬ್ರವರಿ 18ರವರೆಗೆ ವಿಸ್ತರಿಸಲಾಗಿದೆ. ಆದರೆ, ಇಸ್ರೇಲ್ ಇನ್ನೂ ಕೆಲ ಸೇನಾ ಕೇಂದ್ರಗಳನ್ನು ಮುಂದುವರಿಸಲು ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿದ್ದಾರೆ.