Yellapura (Yellapur), Uttara Kannada : ಸಂಕ್ರಾಂತಿ (Makara Sankranti) ಅಂಗವಾಗಿ ನಡೆಯುವ ಯಲ್ಲಾಪುರ (Yellapur) ತಾಲ್ಲೂಕಿನ ಮಲವಳ್ಳಿಯ ಮೂರು ದಿನಗಳ ರಾಮಲಿಂಗೇಶ್ವರ ದೇವರ ಜಾತ್ರೆಯು (Ramalingeshvara Jathre) ಸರಳ ಆಚರಣೆಯೊಂದಿಗೆ ಭಾನುವಾರ ಸಂಪನ್ನಗೊಂಡಿತು. Covid-19 ಕಾರಣದಿಂದ ಈ ಬಾರಿ ಧಾರ್ಮಿಕ ವಿಧಿ ವಿಧಾನಗಳಿಗಷ್ಟೇ ಜಾತ್ರೆ ಸೀಮಿತಗೊಳಿಸಲಾಗಿತ್ತು.
ವಿವಿಧ ಧಾರ್ಮಿಕ ಕಾರ್ಯಗಳು, ಮಹಾ ಸಂಕಲ್ಪದೊಂದಿಗೆ ಜನವರಿ 14ರಂದು ಆರಂಭಗೊಂಡ ಜಾತ್ರೆಯ ರಾತ್ರಿ ಕರಡಿ ಕುಣಿತದ ಸೇವೆ ನಡೆಯಿತು. ಜನವರಿ 15 ಸಂಕ್ರಾಂತಿಯಂದು ರುದ್ರ ಹವನ, ಗಣಹವನ, ಉಪನಿಷತ್ ಹವನ, ಮಹಾಪೂಜೆ, ಬಲಿ ಸೇವೆ, ಪಲ್ಲಕ್ಕಿ ಉತ್ಸವ, ರಥೋತ್ಸವ, ಉರುಳು ಸೇವೆ, ರಥ ಕಾಣಿಕೆ ಅರ್ಪಣೆ ಮುಂತಾದ ಧಾರ್ಮಿಕ ಕಾರ್ಯಗಳು ಜರುಗಿದವು. ಕೊನೆಯ ದಿನವಾದ ಜನವರಿ 16ರಂದು ಶತರುದ್ರ, ವಾರ್ಷಿಕ ದೇವಕಾರ್ಯ, ಆಶೀರ್ವಾದ ಗ್ರಹಣ ಹಾಗೂ ಸಮಾರೋಪ ಕಾರ್ಯಕ್ರಮದೊಂದಿಗೆ ಜಾತ್ರೆ ಸಂಪನ್ನಗೊಂಡಿತು.
ಮೊಕ್ತೇಸರ ಪಿ.ವಿ.ಭಟ್ಟ ಮೊಠಾರಿ ಹಾಗೂ ಆಡಳಿತ ಮಂಡಳಿ ಸದಸ್ಯರ ನೇತೃತ್ವದಲ್ಲಿ ಗೋಕರ್ಣದ ಕ್ಷೇತ್ರ ಪುರೋಹಿತರಾದ ಗಜಾನನ ಹಿರೇ, ಅಮೃತೇಶ ಹಿರೇ ಅವರ ಪ್ರಧಾನ ಆಚಾರತ್ವದಲ್ಲಿ ದೇವಸ್ಥಾನ ಪುರೋಹಿತರಾದ ರಾಮಚಂದ್ರ ಭಟ್ಟ ಭಟ್ರಮನೆ ಅವರ ಸಹಕಾರದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.