Bengaluru: ಮತಗಳ್ಳತನ ಆರೋಪದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಭಟನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಫ್ರೀಡಂ ಪಾರ್ಕ್ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಬಿಗಿ ಭದ್ರತೆ ಒದಗಿಸಿದೆ.
ಪ್ರತಿಭಟನೆ ಬಳಿಕ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದ್ದು, ಕೇವಲ 6 ನಾಯಕರಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಈ ಪಟ್ಟಿಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್, ಸುರ್ಜೇವಾಲ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸೇರಿದ್ದಾರೆ.
ದೂರು ಸಲ್ಲಿಸುವ ವೇಳೆ ರಾಹುಲ್ ಗಾಂಧಿ ಚುನಾವಣಾ ಆಯೋಗ ತಯಾರಿಸಿದ ಡಿಕ್ಲರೇಶನ್ ಮಾದರಿಯಲ್ಲಿ ಸಹಿ ಹಾಕುತ್ತಾರೆಯೇ ಎಂಬುದು ಕುತೂಹಲ ಕೆರಳಿಸಿದೆ. ಆಯೋಗದ ಸೂಚನೆಯಂತೆ, ಸಹಿ ಮಾಡಿದರೆ ಮುಂದೆ ಕಾನೂನಾತ್ಮಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.
ಡಿಕ್ಲರೇಶನ್‌ನಲ್ಲಿ ಉಲ್ಲೇಖಿಸಿದ ಮುಖ್ಯ ಅಂಶಗಳು
- ತಪ್ಪು ಘೋಷಣೆ ನೀಡಿದರೆ, 1950ರ ಪ್ರಜಾಪ್ರಭುತ್ವ ಪ್ರತಿನಿಧಿ ಕಾಯ್ದೆ ಕಲಂ 31ರ ಪ್ರಕಾರ ಒಂದು ವರ್ಷದವರೆಗೆ ಜೈಲು ಅಥವಾ ದಂಡ, ಅಥವಾ ಎರಡೂ ವಿಧಿಸಬಹುದು.
- ಸುಳ್ಳು ಸಾಕ್ಷಿ ಅಥವಾ ಪ್ರಮಾಣಪತ್ರ ನೀಡಿದರೆ, 2023ರ ಭಾರತೀಯ ನ್ಯಾಯ ಸಂಹಿತೆ ಕಲಂ 227ರ ಪ್ರಕಾರ ಕಠಿಣ ಶಿಕ್ಷೆಗಳು ವಿಧಿಸಲಾಗುತ್ತವೆ.
- ನ್ಯಾಯಾಂಗ ಅಥವಾ ಅಧಿಕೃತ ಪ್ರಕರಣಗಳಲ್ಲಿ ಸುಳ್ಳು ಹೇಳಿಕೆ/ವಂಚನೆ ಮಾಡಿದರೆ ಹೆಚ್ಚುವರಿ ಕಾನೂನಾತ್ಮಕ ಕ್ರಮ ಕೈಗೊಳ್ಳಬಹುದು.
- ಸಲ್ಲಿಸಿದ ದಾಖಲೆಗಳು ಸುಳ್ಳು ಎಂದು ಪತ್ತೆಯಾದರೆ ಕಾನೂನಾತ್ಮಕ ಕ್ರಮ ಅನಿವಾರ್ಯ.
- ಈ ಹಿನ್ನೆಲೆಯಲ್ಲಿ, ರಾಹುಲ್ ಗಾಂಧಿ ಸಹಿ ಮಾಡುವರಾ ಅಥವಾ ಬೇಡವೆಂಬ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.