Bengaluru: ಧಾರವಾಡ ಜಿಲ್ಲೆಯ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡರ ಹತ್ಯೆ ಪ್ರಕರಣದಲ್ಲಿ (Yogesh Gowda murder case) ಆರೋಪಿಯಾಗಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಇಂದು ನ್ಯಾಯಾಲಯಕ್ಕೆ ಶರಣಾದರು. ಇತ್ತೀಚೆಗಷ್ಟೆ ಸುಪ್ರೀಂ ಕೋರ್ಟ್ ಅವರ ಜಾಮೀನನ್ನು ರದ್ದುಪಡಿಸಿ, ಒಂದು ವಾರದೊಳಗೆ ನ್ಯಾಯಾಲಯದ ಮುಂದೆ ಹಾಜರಾಗಲು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರಾದರು. ಕೋರ್ಟ್ ಅವರು ಸಿಬಿಐ ವಶದಲ್ಲಿರಲಿ ಎಂದು ಆದೇಶಿಸಿದೆ.
2016ರ ಜೂನ್ 15ರಂದು ಧಾರವಾಡದ ಹೆಬ್ಬಳ್ಳಿ ಕ್ಷೇತ್ರದ ಸದಸ್ಯನಾಗಿದ್ದ ಯೋಗೇಶ್ ಗೌಡರನ್ನು ಅವರದೇ ಜಿಮ್‌ನಲ್ಲಿಯೇ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರ ಪಾಲ್ಗೊಂಡಿರುವ ಆರೋಪಗಳ ಹಿನ್ನೆಲೆಯಲ್ಲಿ 2020ರ ನವೆಂಬರ್ 5ರಂದು ಸಿಬಿಐ ಬಂಧಿಸಿತ್ತು.
ಇತ್ತೀಚೆಗಷ್ಟೆ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ನಾನು ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳು ಜನರ ಮನದಲ್ಲಿದೆ. ಐದು ವರ್ಷಗಳಿಂದ ಕ್ಷೇತ್ರದ ಹೊರಗಿದ್ದರೂ ಜನರು ನನ್ನನ್ನು ಮರೆಯಿಲ್ಲ. ಜಾಮೀನು ರದ್ದಾದರೂ ಕ್ಷೇತ್ರದ ಅಭಿವೃದ್ಧಿಗೆ ವ್ಯತ್ಯಯವಾಗದಂತೆ ನೋಡಿಕೊಂಡಿದ್ದೇನೆ,” ಎಂದರು.
ನ್ಯಾಯಾಲಯಕ್ಕೆ ಹಾಜರಾಗುವ ಹಿನ್ನೆಲೆ ಕ್ಷೇತ್ರದ ಕೆಲಸಗಳು ಸ್ಥಗಿತವಾಗಬಾರದು ಎಂಬ ಉದ್ದೇಶದಿಂದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ಮಾಡಿ, ಜನರ ಕೆಲಸ ವಿಳಂಬವಾಗದಂತೆ ಸೂಚನೆ ನೀಡಿದ್ದಾರೆ. ತಮ್ಮ ಅನುಪಸ್ಥಿತಿಯಲ್ಲಿ ಪತ್ನಿ, ಪುತ್ರಿ ಮತ್ತು ಪಕ್ಷದ ನಾಯಕರೇ ಕ್ಷೇತ್ರದ ದೈನಂದಿನ ಸಮಸ್ಯೆಗಳನ್ನು ನೋಡಿಕೊಳ್ಳಲಿದ್ದಾರೆ ಎಂದಿದ್ದಾರೆ.
“ನನ್ನ ವಿರುದ್ಧ ಒಂದು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಆದರೆ ಇದು ನನಗೆ ಹೊಸ ವಿಷಯವಲ್ಲ. ಎಲ್ಲದರ ಮೇಲೆಯೂ ದೇವರ ನಂಬಿಕೆಯಿದೆ” ಎಂದು ಅವರು ಭಾವುಕರಾಗಿ ಮಾತನಾಡಿದರು. ಅವರ ಪತ್ನಿ ಶಿವಲೀಲಾ ಕುಲಕರ್ಣಿಯವರೂ ಈ ವೇಳೆ ಭಾವೋದ್ರಿಕ್ತರಾದರು.