
ಜಿಂಬಾಬ್ವೆಯ ಕ್ರಿಸ್ಟಿ ಕೊವೆಂಟ್ರಿ (Christy Coventry) ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC-International Olympic Committee)ಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಅವರು ಈ ಹುದ್ದೆಗೇರಿದ ಮೊದಲ ಮಹಿಳೆ ಹಾಗೂ ಆಫ್ರಿಕಾದ ಪ್ರಥಮ ಪ್ರಜೆ ಎನಿಸಿಕೊಂಡಿದ್ದಾರೆ.
41 ವರ್ಷದ ಕೊವೆಂಟ್ರಿ, ಜಿಂಬಾಬ್ವೆಯ ಕ್ರೀಡಾ ಸಚಿವರಾಗಿದ್ದು, 2 ಬಾರಿ ಒಲಿಂಪಿಕ್ ಚಿನ್ನ ಗೆದ್ದ ಈಜು ಸ್ಪರ್ಧಿಯಾಗಿದ್ದರು. ಗುರುವಾರ ನಡೆದ ಐಒಸಿ ಚುನಾವಣೆಯಲ್ಲಿ ಅವರು 6 ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ, 97 ಮತಗಳ ಪೈಕಿ 47 ಮತ ಪಡೆದು ಗೆಲುವು ಸಾಧಿಸಿದರು. ಜೂನ್ 23ರಂದು ಅವರು ಅಧಿಕೃತವಾಗಿ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಲಿದ್ದಾರೆ. ಅವರ ಅವಧಿ 8 ವರ್ಷಗಳ ಕಾಲ ಇರಲಿದೆ.
ಹೊಸದಾಗಿ ಆಯ್ಕೆಯಾಗಿರುವ ಕೊವೆಂಟ್ರಿ, 2036ರ ಒಲಿಂಪಿಕ್ಸ್ ಆತಿಥ್ಯ ಹಕ್ಕುಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಹುದ್ದೆಗೆ ಸ್ಪರ್ಧಿಸಿದ್ದ ಸೆಬಾಸ್ಟಿಯನ್ ಕೋ ಕೇವಲ 8 ಮತ ಪಡೆದರು. ಇದುವರೆಗೆ ಜರ್ಮನಿಯ ಥಾಮಸ್ ಬಾಕ್ ಅಧ್ಯಕ್ಷರಾಗಿದ್ದರು, ಅವರು ಗರಿಷ್ಠ 12 ವರ್ಷಗಳ ಅವಧಿಗೆ ಈ ಹುದ್ದೆ ನಿರ್ವಹಿಸಿದರು.
2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಬಾಕ್ಸಿಂಗ್ ಅನ್ನು ಪುನಃ ಸೇರಿಸಲು ಐಒಸಿ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದಾರೆ. ಐಒಸಿ ಆಡಳಿತ ಮಂಡಳಿಯ 144ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಸಭೆಯಲ್ಲಿ ಬಾಕ್ಸಿಂಗ್ ಸೇರ್ಪಡೆಯ ಬಗ್ಗೆ ಸದಸ್ಯರ ಅಭಿಪ್ರಾಯ ಕೇಳಿದಾಗ, ಎಲ್ಲರೂ ಕೈ ಎತ್ತಿ ಸಮ್ಮತಿ ಸೂಚಿಸಿದರು. 2022ರ ಫೆಬ್ರವರಿಯಲ್ಲಿ ಬಾಕ್ಸಿಂಗ್ ಅನ್ನು ಕ್ರೀಡೆಗಳ ಪಟ್ಟಿಯಿಂದ ತೆಗೆದುಹಾಕಲಾಗಿತ್ತು, ಆದರೆ ಭಾರತ ಸೇರಿದಂತೆ ಹಲವಾರು ದೇಶಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.