Andhra Pradesh: ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್‌ಗೆ ( Pawan Kalyan) ತಿರುಮಲ ಲಡ್ಡು (Tirumala Laddu) ಕಲಬೆರಕೆ ವಿವಾದದ ಕುರಿತು ನೀಡಿದ್ದ ಹೇಳಿಕೆ ಅವರಿಗೆ ಕಾನೂನಿನ ಉಪಟಳ ತಂದಿದೆ.
ಹೈದರಾಬಾದ್ ಸಿಟಿ ಸಿವಿಲ್ ಕೋರ್ಟ್ (Hyderabad City Civil Court) ಪವನ್ ಕಲ್ಯಾಣ್ ಗೆ (Pawan Kalyan) ಸಮನ್ಸ್ ಜಾರಿ ಮಾಡಿದೆ.
ಸಮ್ಸನ್ ನಲ್ಲಿ ನವೆಂಬರ್ 22ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ DCM ಪವನ್ ಗೆ ಸೂಚಿಸಲಾಗಿದೆ.
ತಿರುಮಲ ಲಡ್ಡು ಬಗ್ಗೆ ಭಕ್ತರ ಭಾವನೆಗಳಿಗೆ ಧಕ್ಕೆ ತರುವಂತೆ ಪವನ್ ಕಾಮೆಂಟ್ ಮಾಡಿದ್ದಾರೆ ಎಂದು ವಕೀಲ ರಾಮರಾವ್ ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದರು.
ಇದನ್ನು ಆಲಿಸಿದ ನ್ಯಾಯಾಲಯ ಅವರಿಗೆ ನೋಟಿಸ್ ನೀಡಿದೆ.ಅಯೋಧ್ಯೆಗೆ ಕಳುಹಿಸಿದ್ದ ತಿರುಮಲ ಲಡ್ಡುವಿನಲ್ಲಿ ಕಲಬೆರಕೆ ಆಗಿದೆ ಎಂದು ಪವನ್ ಹೇಳಿದ್ದರು.
ಈ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಿಂದ ಅಳಿಸಿ ಹಾಕಬೇಕು ಎಂದು ರಾಮರಾವ್ ಕೋರ್ಟ್ ಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು. ಅಲ್ಲದೇ ಮತ್ತೊಮ್ಮೆ ಇಂತಹ ಹೇಳಿಕೆಗಳು ನೀಡದಂತೆ ಗ್ಯಾಗ್ ಆರ್ಡರ್ ನೀಡಬೇಕು ಎಂದು ಮನವಿ ಮಾಡಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಹೈದರಾಬಾದ್ ಸಿಟಿ ಸಿವಿಲ್ ಕೋರ್ಟ್, ಪವನ್ ಕಲ್ಯಾಣ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.
ಪ್ರಕರಣವನ್ನು ಸಿಬಿಐ ಹಾಗೂ ಆಂಧ್ರ ಪ್ರದೇಶ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದರ ನಡುವೆ ಲಡ್ಡು ತಯಾರಿಕೆಯಲ್ಲಿ ಬಳಕೆ ಮಾಡಿರುವ ತುಪ್ಪದಲ್ಲಿ ಕಲಬೆರಕೆ ಆಗಿದೆ ಎಂದು ಡಿಸಿಎಂ ಪವನ್ ಕಲ್ಯಾಣ್ ಆಕ್ರೋಶ ವ್ಯಕ್ತಪಡಿಸಿದ್ದರು.
ತಿರುಪತಿಯಲ್ಲಿ ಆಯೋಜಿಸಲಾಗಿದ್ದ ವರಾಹಿ ಡಿಕ್ಲರೇಷನ್ ಕಾರ್ಯಕ್ರಮದಲ್ಲಿ ಮಾತನಾಡಿ, ಸನಾತನ ಧರ್ಮದ ಬಗ್ಗೆ ಭಾಷಣ ಮಾಡಿದ್ದರು. ಅಲ್ಲದೇ ಕಳೆದ ತಿಂಗಳು 22ನೇ ತಾರೀಕು ಪ್ರಾಯಶ್ಚಿತ್ತ ದೀಕ್ಷೆ ಕೂಡ ನಡೆಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪವನ್ ಕಲ್ಯಾಣ್, “ಕೆಲವು ದಿನಗಳ ಹಿಂದೆ ವೈಎಸ್ಆರ್ಸಿಪಿ ಪಕ್ಷದ ಐದು ವರ್ಷಗಳ ಆಡಳಿತದಲ್ಲಿ ತಿರುಮಲದ ಪಾವಿತ್ರ್ಯತೆಗೆ ಧಕ್ಕೆ ತರಲು ಹಲವು ಅರಾಜಕತೆಗಳು ನಡೆದಿವೆ.
ಈ ಹಿಂದಿನ ಸರ್ಕಾರದ ನಾಯಕರು ಅನೇಕ ವಿಧ್ವಂಸಕ ಘಟನೆಗಳಲ್ಲಿ ಭಾಗಿಯಾಗಿದ್ದಾರೆ, ಆ ಎಲ್ಲ ಸಮಸ್ಯೆಗಳನ್ನು ಉನ್ನತ ನ್ಯಾಯಾಂಗ ಮತ್ತು ರಾಷ್ಟ್ರದ ಗಮನಕ್ಕೆ ತರಲಾಗುತ್ತಿದೆ” ಎಂದು ಹೇಳಿದ್ದರು.