Washington: ಅಮೆರಿಕದ ವಾಷಿಂಗ್ಟನ್ ನಲ್ಲಿ (Washington) ಬುಧವಾರ ರಾತ್ರಿ ಭೀಕರ ವಿಮಾನ ಅಪಘಾತ ಸಂಭವಿಸಿದೆ. ಪ್ಯಾಸೆಂಜರ್ ಜೆಟ್ ಮತ್ತು ಸೇನಾ ಹೆಲಿಕಾಪ್ಟರ್ ಡಿಕ್ಕಿಯಾಗಿದ್ದು, ಅಪಘಾತದ ದೃಶ್ಯಗಳು ಸೆರೆಹಿಡಿಯಲಾಗಿದೆ.
ಅಮೆರಿಕನ್ ಏರ್ಲೈನ್ಸ್‌ನ 5342ನೇ ವಿಮಾನ ಮತ್ತು ಬ್ಲಾಕ್ ಹಾವ್ಕ್ ಹೆಲಿಕಾಪ್ಟರ್ ಮಧ್ಯೆ ಈ ದುರ್ಘಟನೆ ಸಂಭವಿಸಿದೆ. ಪ್ಯಾಸೆಂಜರ್ ಜೆಟ್ ನಲ್ಲಿ 60 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು.
ಫೆಡರಲ್ ವಿಮಾನ ಆಡಳಿತ (ಎಫ್ಎಎ)ನ ಪ್ರಕಾರ, ಬುಧವಾರ ರಾತ್ರಿ 9ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ರೋನಾಲ್ಡ್ ರೀಗಾನ್ ವಾಷಿಂಗ್ಟನ್ ನ್ಯಾಷನಲ್ ಏರ್ಪೋರ್ಟ್‌ನ ರನ್ವೇ 33ರಲ್ಲಿ ಜೆಟ್ ಇಳಿಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಅಪಘಾತ ಸಂಭವಿಸಿದ ತಕ್ಷಣ ತುರ್ತು ಸೇವಾ ಸಿಬ್ಬಂದಿ, ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆ, ಕೊಲಂಬಿಯಾ ಅಗ್ನಿಶಾಮಕ ದಳ ಹಾಗೂ ತುರ್ತು ವೈದ್ಯಕೀಯ ಸೇವಾ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಿದವು. ಪೊಟೊಮಾಕ್ ನದಿಯಲ್ಲಿ ಶೋಧ ಕಾರ್ಯ ಮುಂದುವರಿಯುತ್ತಿದೆ.
ಭದ್ರತಾ ಕಾರಣಗಳಿಂದಾಗಿ ರೋನಾಲ್ಡ್ ರೀಗಾನ್ ಏರ್ಪೋರ್ಟ್ ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಎಲ್ಲ ಹಾರಾಟ ಮತ್ತು ಆಗಮನಗಳನ್ನು ಸ್ಥಗಿತಗೊಳಿಸಲಾಗಿದೆ.
ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಈ ಅಪಘಾತದ ಕುರಿತು ಪ್ರತಿಕ್ರಿಯಿಸಿ, “ಇದು ಭಯಾನಕ ದುರಂತ. ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿ ಸಿಗಲಿ. ತಕ್ಷಣ ನಮ್ಮ ರಕ್ಷಣಾ ತಂಡ ಅದ್ಭುತ ಕಾರ್ಯಾಚರಣೆ ನಡೆಸಿದೆ” ಎಂದು ತಿಳಿಸಿದ್ದಾರೆ.