Nashik: 2022ರ ಭಾರತ್ ಜೋಡೋ ಯಾತ್ರೆ ವೇಳೆ ವೀರ ಸಾವರ್ಕರ್ (Savarkar) ಕುರಿತು ಮಾಡಿದ ಟೀಕಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಮಾನನಷ್ಟ ಪ್ರಕರಣವೊಂದನ್ನು ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಮಹಾರಾಷ್ಟ್ರದ ನಾಸಿಕ್ ನ್ಯಾಯಾಲಯ ಇಂದು ರಾಹುಲ್ ಗಾಂಧಿಗೆ ಜಾಮೀನು ನೀಡಿದೆ.
ರಾಹುಲ್ ಗಾಂಧಿ ಅವರು ವಿಡಿಯೋ ಕಾಲ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿ, ತಾವು ಅಪರಾಧಿ ಅಲ್ಲ ಎಂದು ಸ್ಪಷ್ಟಪಡಿಸಿದರು. ನಂತರ ಅವರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದರು. ನ್ಯಾಯಾಧೀಶರು ₹15,000 ಶ್ಯೂರಿಟಿ ಬಾಂಡ್ ಮೇಲೆ ಜಾಮೀನು ಮಂಜೂರಿಸಿದರು.
ಈ ಪ್ರಕರಣವನ್ನು ನಾಸಿಕ್ ನಿವಾಸಿ ದೇವೇಂದ್ರ ಭೂತಾಡ ಎಂಬವರು ದಾಖಲಿಸಿದ್ದು, ಅವರ ಪರವಾಗಿ ವಕೀಲ ಮನೋಜ್ ಪಿಂಗಳೆ ವಾದಿಸಿದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 (ಮಾನನಷ್ಟ) ಮತ್ತು 504 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರ ಪ್ರಕಾರ, ರಾಹುಲ್ ಗಾಂಧಿ ಅವರು 2022ರ ನವೆಂಬರ್ನಲ್ಲಿ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಮತ್ತು ಹಿಂಗೋಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಾವರ್ಕರ್ ಕುರಿತು ಅವಮಾನಕಾರಿಯಾಗಿ ಮಾತನಾಡಿದ್ದರು. ಸಾವರ್ಕರ್ ಬ್ರಿಟಿಷರಿಗೆ ಮನವಿ ಸಲ್ಲಿಸಿ ಮುಕ್ತಿಯಾಗಿದ್ದರು ಎಂಬ ಹೇಳಿಕೆಯಿಂದ ಅವರ ಮಾನಹಾನಿ ಸಂಭವಿಸಿದೆ ಎಂದು ದೂರಿದೆ.
ಈ ಹೇಳಿಕೆಗಳು ಬಿಜೆಪಿ ಮತ್ತು ಶಿವಸೇನಾ ಬಣಗಳಿಂದ ತೀವ್ರ ವಿರೋಧಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ಈ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.