ಗೂಗಲ್ ತನ್ನ ಆಂಡ್ರಾಯ್ಡ್ (Google Android PC) ಅನ್ನು ಪಿಸಿಗಳಿಗೆ ತರುವ ಬಗ್ಗೆ ಹೆಚ್ಚು ಸಮಯದಿಂದ ಬರುತ್ತಿದ್ದ ವದಂತಿಗಳನ್ನು ಈಗ ಅಧಿಕೃತವಾಗಿ ದೃಢಪಡಿಸಿದೆ. ಗೂಗಲ್ ನೀಡಿದ ಟೀಸರ್ ಮತ್ತು ಅಧಿಕೃತ ಘೋಷಣೆಗಳು ತಂತ್ರಜ್ಞಾನ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿವೆ. ಮೊಬೈಲ್ ಮತ್ತು desktop ಕಂಪ್ಯೂಟಿಂಗ್ ನಡುವಿನ ಅಂತರವನ್ನು ಕಡಿಮೆ ಮಾಡುವ ಗೂಗಲ್ ನ ಮಹತ್ವಾಕಾಂಕ್ಷೆಯ ಯೋಜನೆ ಈಗ ನೈಜವಾಗಲು ಸಮೀಪವಾಗಿದೆ.
ಈ ವಾರದ Snapdragon ಶೃಂಗಸಭೆಯಲ್ಲಿ ಗೂಗಲ್ನ platforms ಮತ್ತು ಸಾಧನಗಳ ಮುಖ್ಯಸ್ಥ ರಿಕ್ ಓಸ್ಟರ್ಲೋಹ್ ಈ ವಿಷಯವನ್ನು ಅಧಿಕೃತವಾಗಿ ದೃಢಪಡಿಸಿದ್ದಾರೆ. ಕ್ವಾಲ್ಕಾಮ್ ಸಿಇಒ ಕ್ರಿಸ್ಟಿಯಾನೊ ಅಮೋನ್ ಅವರೊಂದಿಗೆ ಮಾತನಾಡಿದ ಓಸ್ಟರ್ಲೋಹ್, ಪಿಸಿಗಳಲ್ಲಿ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಹೊಂದಿರುವ ವಿಭಿನ್ನ ವ್ಯವಸ್ಥೆಗಳನ್ನು ಸಂಯೋಜಿಸಲು ಗೂಗಲ್ ಯೋಜನೆ ಆರಂಭಿಸಿದೆ ಎಂದು ತಿಳಿಸಿದರು.
ಗೂಗಲ್ ಈ ಯೋಜನೆಯಿಂದ ಪಿಸಿಗಳು ಮತ್ತು desktop ಕಂಪ್ಯೂಟಿಂಗ್ ವ್ಯವಸ್ಥೆಗಳಿಗೆ ಸಾಮಾನ್ಯ ತಾಂತ್ರಿಕ ಅಡಿಪಾಯವನ್ನು ನಿರ್ಮಿಸಲು ಉದ್ದೇಶಿಸಿದೆ. ಈ ಏಕೀಕರಣದಿಂದ ಎಐ, ಜೆಮಿನಿ ಮಾದರಿಗಳು, ಸಹಾಯಕ ಹಾಗೂ ಎಲ್ಲಾ ಅಪ್ಲಿಕೇಶನ್‌ಗಳು ಮತ್ತು ಡೆವಲಪರ್ ಸಮುದಾಯವನ್ನು ಪಿಸಿ ವಲಯಕ್ಕೆ ತರುವಲ್ಲಿ ಸಹಾಯವಾಗುತ್ತದೆ. ಓಸ್ಟರ್ಲೋಹ್ ಹೇಳುವಂತೆ, ಆಂಡ್ರಾಯ್ಡ್ ಎಲ್ಲ ಕಂಪ್ಯೂಟಿಂಗ್ ವರ್ಗದ ಬಳಕೆದಾರರಿಗೆ ಸೇವೆ ನೀಡಲು ಸಾಧ್ಯವಾಗಲಿದೆ.
ಸಂವಾದದ ವೇಳೆ ಕ್ವಾಲ್ಕಾಮ್ (Qualcomm) ಸಿಇಒ ಅಮೋನ್ ಸಹ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು. ಆಂಡ್ರಾಯ್ಡ್ ಪಿಸಿಗಳನ್ನು ಗೂಗಲ್ ಮಾರುಕಟ್ಟೆಗೆ ಹೇಗೆ ತರುತ್ತದೆ ಎಂಬುದು ಸ್ಪಷ್ಟಪಡಿಸಲ್ಪಡದಿದ್ದರೂ, ಕ್ರೋಮ್ಓಎಸ್ ಮತ್ತು ಆಂಡ್ರಾಯ್ಡ್ ಅನ್ನು ಒಂದೇ ಪ್ಲಾಟ್ಫಾರ್ಮ್‌ನಲ್ಲಿ ಸಂಯೋಜಿಸುವ ಯೋಜನೆಯ ಕುರಿತು ತಿಳಿದುಬಂದ ಕೆಲವು ತಿಂಗಳ ನಂತರ ಈ ಘೋಷಣೆ ಬಂದಿದೆ.
ಈ ಯೋಜನೆ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಎಸಗಲಿದೆ. ಮೊಬೈಲ್ ಶಕ್ತಿ ಮತ್ತು ಪಿಸಿಯ ಸಾಮರ್ಥ್ಯಗಳನ್ನು ಸಂಯೋಜಿಸುವ ಹೊಸ ಸಾಧನವು ಬಳಕೆದಾರರಿಗೆ ಹೇಗೆ ಪ್ರಯೋಜನ ನೀಡುತ್ತದೆ ಎಂಬುದನ್ನು ತಂತ್ರಜ್ಞಾನ ಜಗತ್ತು ಕಾತರದಿಂದ ಕಾಯುತ್ತಿದೆ.







