Gandhinagar: ಗುಜರಾತ್‌ನಲ್ಲಿ ನಿನ್ನೆ (ಗುರುವಾರ) ಎಲ್ಲಾ ಸಚಿವರು ರಾಜೀನಾಮೆ ನೀಡಿದ ನಂತರ ಇಂದು ಹೊಸ ಸಚಿವ ಸಂಪುಟ ರಚನೆಯಾಗಿದೆ. ಗಾಂಧಿನಗರದಲ್ಲಿ ನಡೆದ ಸಮಾರಂಭದಲ್ಲಿ 26 ಸದಸ್ಯರ ಹೊಸ ಸಚಿವ ಸಂಪುಟ ಪ್ರಮಾಣವಚನ ಸ್ವೀಕರಿಸಿತು.
ಈ ಹೊಸ ಸಚಿವರಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ಹಾಗೂ ಶಾಸಕಿ ರಿವಾಬಾ ಜಡೇಜಾ ಕೂಡ ಇದ್ದಾರೆ.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಎಲ್ಲ ಸಚಿವರು ರಾಜೀನಾಮೆ ನೀಡಿದ್ದು, ಇದು ಸಚಿವ ಸಂಪುಟ ಪುನರ್ರಚನೆ ಯೋಜನೆಯ ಭಾಗವಾಗಿದೆ. ಪಕ್ಷದ ನಾಯಕರ ಪ್ರಕಾರ, ಆಡಳಿತ ಮತ್ತು ರಾಜಕೀಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ಗುಜರಾತ್ ವಿಧಾನಸಭೆಯಲ್ಲಿ ಒಟ್ಟು 182 ಸದಸ್ಯರಿದ್ದು, ನಿಯಮ ಪ್ರಕಾರ ಸಚಿವರ ಸಂಖ್ಯೆ ಗರಿಷ್ಠ 27ರೊಳಗೇ ಇರಬೇಕು.
ರಿವಾಬಾ ಜಡೇಜಾ 1990ರಲ್ಲಿ ಗುಜರಾತ್‌ನ ರಾಜ್ಕೋಟಿನಲ್ಲಿ ಜನಿಸಿದರು. ಅಟ್ಮಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಸೈನ್ಸಸ್ ಕಾಲೇಜಿನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಅವರು 2016ರ ಏಪ್ರಿಲ್ 17ರಂದು ರವೀಂದ್ರ ಜಡೇಜಾ ಅವರನ್ನು ವಿವಾಹವಾಗಿದ್ದು, 2019ರಲ್ಲಿ ಬಿಜೆಪಿ ಸೇರಿದರು.
2022ರ ವಿಧಾನಸಭಾ ಚುನಾವಣೆಯಲ್ಲಿ ಜಾಮ್ನಗರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ರಜಪೂತ ಸಮುದಾಯದವರಾದ ಅವರು, ಬಿಜೆಪಿ ಸೇರುವ ಮೊದಲು ಕರ್ಣಿಸೇನಾ ಮಹಿಳಾ ವಿಭಾಗದ ಮುಖ್ಯಸ್ಥೆ ಆಗಿದ್ದರು.
ಪಕ್ಷದ ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಗೃಹ ಸಚಿವ ಅಮಿತ್ ಶಾ, ಸಿ.ಆರ್. ಪಾಟೀಲ್ ಮತ್ತು ಸಿಎಂ ಭೂಪೇಂದ್ರ ಪಟೇಲ್ ಭಾಗವಹಿಸಿದ ಸಭೆಯಲ್ಲಿ ಈ ಬದಲಾವಣೆಗಳ ಕುರಿತು ಚರ್ಚೆ ನಡೆದಿದೆ. 2027ರ ಚುನಾವಣೆಗೆ ಮುನ್ನ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಸಚಿವ ಸಂಪುಟ ಪುನರ್ರಚನೆ ಕೈಗೊಳ್ಳಲಾಗಿದೆ. ಹೊಸ ರಾಜ್ಯಾಧ್ಯಕ್ಷರಾಗಿ ಜಗದೀಶ್ ವಿಶ್ವಕರ್ಮ ನೇಮಕವಾದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ಅದೇ ಸಮಯದಲ್ಲಿ, ಆಮ್ ಆದ್ಮಿ ಪಕ್ಷದ ಯುವ ನಾಯಕ ಗೋಪಾಲ್ ಇಟಾಲಿಯಾ ನೇತೃತ್ವದಲ್ಲಿ ಬಿಜೆಪಿ ಬಲಗಟ್ಟಲು ಹೊಸ ರಾಜಕೀಯ ಸಮೀಕರಣಗಳತ್ತ ಪಕ್ಷ ಕಣ್ಣೊತ್ತಿದೆ.







