Bengaluru, Karnataka, India : ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ICC ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ 2025 ರೋಚಕ ಹಂತಕ್ಕೆ ತಲುಪಿದೆ. ವಿಶ್ವದ ಅತ್ಯುತ್ತಮ ತಂಡಗಳು ಕಿರೀಟಕ್ಕಾಗಿ ಕಾದಿರುವ ಈ ಸ್ಪರ್ಧೆ ಇದೀಗ ಸೆಮಿಫೈನಲ್ ಹಂತ ಪ್ರವೇಶಿಸಿದೆ.
ಮೊದಲ ಸೆಮಿಫೈನಲ್ ಇಂದು ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಗುವಾಹಟಿಯಲ್ಲಿ ನಡೆಯಲಿದೆ. ನಾಳೆ (ಅಕ್ಟೋಬರ್ 30) ನವಿ ಮುಂಬೈಯಲ್ಲಿ ನಡೆಯುವ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.
ಏಳು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ, ಅಜೇಯವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಒಟ್ಟು ಏಳು ಪಂದ್ಯಗಳಲ್ಲಿ ಆರು ಗೆಲುವು ದಾಖಲಿಸಿ, ಮಳೆ ಕಾರಣದಿಂದ ರದ್ದಾದ ಒಂದು ಪಂದ್ಯವನ್ನೂ ಸೇರಿಸಿ 13 ಅಂಕಗಳನ್ನು ಗಳಿಸಿದೆ.
ಅತ್ತ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ, ನಾಲ್ಕನೇ ಸ್ಥಾನದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಏಳು ಪಂದ್ಯಗಳಲ್ಲಿ ಮೂರು ಗೆಲುವು, ಮೂರು ಸೋಲು ಮತ್ತು ಒಂದು ಸಮನಿನೊಂದಿಗೆ 7 ಅಂಕಗಳ ಸಹಿತ ಅಂತಿಮ ನಾಲ್ಕರ ಪೈಕಿ ಸ್ಥಾನ ಪಡೆದಿದೆ.
ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ಎದುರು ಭಾರತ ಸವಾಲು ಎಸೆದಿದ್ದರೂ, ಆಸೀಸ್ 331 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ 3 ವಿಕೆಟ್‌ಗಳ ಅಂತರದಲ್ಲಿ ಗೆದ್ದಿತ್ತು. ಆದ್ದರಿಂದ ಫೈನಲ್ ಪ್ರವೇಶಿಸಲು ಭಾರತ ಈ ಬಾರಿ ತನ್ನ ಶ್ರೇಷ್ಠ ಪ್ರದರ್ಶನವನ್ನೇ ತೋರಿಸಬೇಕಿದೆ.
ಐಸಿಸಿ ಮಹಿಳಾ ವಿಶ್ವಕಪ್‌ನ ಫೈನಲ್ ಪಂದ್ಯ ನವೆಂಬರ್ 2ರಂದು (ಭಾನುವಾರ) ನವಿ ಮುಂಬೈಯಲ್ಲಿ ನಡೆಯಲಿದ್ದು, ಕಿರೀಟಕ್ಕಾಗಿ ನಿರೀಕ್ಷೆ ತೀವ್ರಗೊಂಡಿದೆ.







