Subramanya, Dakshina Kannada : ಮೂರು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ (Yeshasvini Health Insurance Scheme) ಅಕ್ಟೋಬರ್ ನಿಂದ ಮರು ಜಾರಿ ಮಾಡಲಾಗುವುದು ಎಂದು ಸಚಿವ ಎಸ್.ಟಿ. ಸೋಮಶೇಖರ್ (S. T. Somashekhar) ತಿಳಿಸಿದ್ದಾರೆ.
ಕುಕ್ಕೆ ಸುಬ್ರಮಣ್ಯದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವರು ” ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಆರಂಭಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದು ಅಕ್ಟೋಬರ್ 2 ಗಾಂಧಿ ಜಯಂತಿ (Gandhi Jayanthi) ಯಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಈ ಯೋಜನೆಗೆ ಚಾಲನೆ ನೀಡಲಿದ್ದಾರೆ” ಎಂದು ತಿಳಿಸಿದರು.
ಯಶಸ್ವಿನಿ ಯೋಜನೆ ಮರು ಜಾರಿಯಾದರೆ ಸಹಕಾರ ಕ್ಷೇತ್ರದ 41 ಲಕ್ಷ ಸದಸ್ಯರು ಮತ್ತು ಅವರ ಕುಟುಂಬವನ್ನು ಒಳಗೊಂಡ ರಾಜ್ಯದ 1.5 ಕೋಟಿ ಜನರು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಈ ಯೋಜನೆ ಮೂಲಕ ವೈದ್ಯಕೀಯ ಕ್ಷೇತ್ರದ 14 ವಿಭಾಗಗಳಲ್ಲಿ ಗುರುತಿಸಿದ 295 ಕಾಯಿಲೆಗಳ 823 ಶಸ್ತ್ರಚಿಕಿತ್ಸೆಗೆ ನಗದು ರಹಿತ ಸೌಲಭ್ಯ ಪಡೆಯಬಹುದು ಮತ್ತು ಈ ಮೊದಲಿದ್ದ 905 ಯಶಸ್ವಿನಿ ವರ್ಕ್ ಆಸ್ಪತ್ರೆಗಳನ್ನು 1800 ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಗ್ರಾಮೀಣ ಪ್ರದೇಶದಲ್ಲಿ ಯಶಸ್ವಿನಿ ಯೋಜನೆಯಡಿಯಲ್ಲಿ 1 ಬಾರಿ ಚಿಕಿತ್ಸೆಗೆ ಒಳಗಾದರೆ 1.25 ಲಕ್ಷ ರೂ. ಮಿತಿ ಹಾಗೂ ಒಂದಕ್ಕಿಂತ ಹೆಚ್ಚು ಬಾರಿ ಚಿಕಿತ್ಸೆಗೆ ಒಳಗಾದರೆ 2 ಲಕ್ಷ ರೂ.ವರೆಗೆ ನಗದು ರಹಿತ ಶಸ್ತ್ರ ಚಿಕಿತ್ಸಾ ಸೌಲಭ್ಯ ಪಡೆಯಬಹುದು ಎನ್ನಲಾಗಿದೆ.