
New Delhi: ಭಾರತದ ಮುಖ್ಯ ಆರ್ಥಿಕ ಸಲಹೆಗಾರ (CEA-Chief Economic Advisor) ವಿ ಅನಂತನಾಗೇಶ್ವರನ್ (Ananthanageswaran) ಅವರ ಅಧಿಕಾರಾವಧಿಯನ್ನು ಸರ್ಕಾರ ಇನ್ನೂ ಎರಡು ವರ್ಷ ವಿಸ್ತರಿಸಿದೆ. 2027ರ ಮಾರ್ಚ್ 31ರವರೆಗೆ ಅವರು ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. 2022ರಲ್ಲಿ ಮೂರು ವರ್ಷಗಳ ಅವಧಿಗೆ ನೇಮಕಗೊಂಡ ಅನಂತನಾಗೇಶ್ವರನ್, 2022ರ ಜನವರಿ 28ರಂದು ಅಧಿಕಾರ ಸ್ವೀಕರಿಸಿದ್ದರು. ಈ ವರ್ಷದ ಮಾರ್ಚ್ 31ರಂದು ಅವರ ಹಾಲಿ ಅಧಿಕಾರಾವಧಿ ಪೂರ್ಣಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ನೇಮಕಾತಿ ಸಮಿತಿ ಅವರ ಅಧಿಕಾರಾವಧಿ ವಿಸ್ತರಿಸಲು ನಿರ್ಧರಿಸಿದೆ.
ಮುಖ್ಯ ಆರ್ಥಿಕ ಸಲಹೆಗಾರರು ಸರ್ಕಾರಕ್ಕೆ ಆರ್ಥಿಕ ನೀತಿಗಳ ಬಗ್ಗೆ ಸಲಹೆ ನೀಡುವ ಪ್ರಮುಖ ಹುದ್ದೆ ಹೊಂದಿರುತ್ತಾರೆ. ಬಜೆಟ್ ಸಿದ್ಧತೆ ವೇಳೆ ನಡೆಸುವ ಆರ್ಥಿಕ ಸಮೀಕ್ಷೆಯೂ ಸಿಇಎ ಮಾರ್ಗದರ್ಶನದಲ್ಲಿ ನಡೆಯುತ್ತದೆ. ದೇಶದ ಆರ್ಥಿಕ ಸ್ಥಿತಿ, ಭವಿಷ್ಯದ ಆರ್ಥಿಕ ದೃಷ್ಟಿಕೋನ, ಆರ್ಥಿಕತೆಯನ್ನು ಉತ್ತೇಜಿಸಲು ಅಗತ್ಯ ಕ್ರಮಗಳ ಬಗ್ಗೆ ವರದಿ ನೀಡುವ ಜವಾಬ್ದಾರಿ ಈ ಹುದ್ದೆಗೆ ಸೇರಿದೆ.
ತಮಿಳುನಾಡಿನ ಮದುರೈ ಮೂಲದ 62 ವರ್ಷದ ಅನಂತನಾಗೇಶ್ವರನ್ ಅವರು ಅಹ್ಮದಾಬಾದ್ ಐಐಎಂ ಮತ್ತು ಅಮೆರಿಕದ ಮಸಾಚುಸೆಟ್ಸ್ ಅಮ್ಹರ್ಸ್ಟ್‌ನ ಐಸನ್ಬರ್ಕ್ ಮ್ಯಾನೇಜ್ಮೆಂಟ್ ಸ್ಕೂಲ್‌ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಸ್ವಿಸ್ ಯೂನಿಯನ್ ಬ್ಯಾಂಕ್, ಕ್ರೆಡಿಟ್ ಸ್ವೀಸ್ ಮುಂತಾದ ಖಾಸಗಿ ಸಂಸ್ಥೆಗಳಲ್ಲಿ 17 ವರ್ಷ ಕಾರ್ಯನಿರ್ವಹಿಸಿದ್ದು, ಹಲವಾರು ಭಾರತೀಯ ಕಂಪನಿಗಳ ಮಂಡಳಿಯಲ್ಲೂ ಸದಸ್ಯರಾಗಿದ್ದರು. ಅವರು ಆವಿಸ್ಕಾರ್ ಇಂಡಿಯಾ ಮೈಕ್ರೋ ವೆಂಚರ್ ಕ್ಯಾಪಿಟಲ್ ಫಂಡ್‌ನ ಸಹ-ಸಂಸ್ಥಾಪಕರಾಗಿದ್ದು, ತಕ್ಷಶಿಲಾ ಇನ್ಸ್ಟಿಟ್ಯೂಟ್‌ನ ಸ್ಥಾಪಕರಾಗಿದ್ದಾರೆ.