
ಆಪಲ್ ತನ್ನ ಹೆಲ್ತ್ ಆ್ಯಪ್‌ಗೆ ದೊಡ್ಡ ಮರುವಿನ್ಯಾಸ ನೀಡಲು ಯೋಜನೆ ಮಾಡುತ್ತಿದೆ. ಈ ಮಾರ್ಪಾಡಿನಲ್ಲಿ ‘AI ಡಾಕ್ಟರ್’ (AI Doctor) ನಂತಹ ವೈಶಿಷ್ಟ್ಯಗಳು ಸೇರಲಿವೆ. ಆಪಲ್ ಸಿಇಒ ಟಿಮ್ ಕುಕ್, ಆರೋಗ್ಯ ಕ್ಷೇತ್ರದಲ್ಲಿ ಕಂಪನಿಯ ಕೊಡುಗೆ ಮಹತ್ತರವಾಗಲಿದೆ ಎಂದು ನಂಬುತ್ತಾರೆ.
Bloomberg ವರದಿ ಪ್ರಕಾರ, ಆಪಲ್ ‘ಪ್ರಾಜೆಕ್ಟ್ ಮಲ್ಬೆರಿ’ ಎಂಬ ಹೊಸ ಪ್ರಯತ್ನದಲ್ಲಿ AI ಆಧಾರಿತ ಆರೋಗ್ಯ ತರಬೇತುದಾರರನ್ನು ಹೆಲ್ತ್ ಆ್ಯಪ್‌ಗೆ ಸೇರಿಸಲು ಸಿದ್ಧತೆ ನಡೆಸುತ್ತಿದೆ. ಈ AI ಏಜೆಂಟ್ ಬಳಕೆದಾರರ ಆರೋಗ್ಯ ಡೇಟಾವನ್ನು ವಿಶ್ಲೇಷಿಸಿ, ಪ್ರಾಥಮಿಕ ವೈದ್ಯಕೀಯ ಸಲಹೆಗಳನ್ನು ಒದಗಿಸುತ್ತದೆ. ಹೊಸ ಹೆಲ್ತ್ ಅಪ್ಲಿಕೇಶನ್, iPhone, ಆಪಲ್ ವಾಚ್, ಇಯರ್ಬಡ್ಸ್ ಮತ್ತು ಇತರ ಸಾಧನಗಳಿಂದ ಡೇಟಾ ಸಂಗ್ರಹಿಸಿ, ವೈಯಕ್ತಿಕ ಆರೋಗ್ಯ ಶಿಫಾರಸುಗಳನ್ನು ನೀಡಲಿದೆ.
ಆಪಲ್ ಪ್ರಸ್ತುತ ತನ್ನದೇ ವೈದ್ಯರಿಂದ AI ತರಬೇತಿ ನೀಡುತ್ತಿದೆ. ಶೀಘ್ರದಲ್ಲೇ ಬಾಹ್ಯ ವೈದ್ಯರನ್ನು ಸಹ ಈ ಪ್ರಕ್ರಿಯೆಯಲ್ಲಿ ಸೇರಿಸಲಾಗುವುದು. ಕ್ಯಾಲಿಫೋರ್ನಿಯಾದ ಓಕ್ಲ್ಯಾಂಡ್ ನಲ್ಲಿ ಆಪಲ್ ಹೊಸ ಸ್ಟುಡಿಯೋ ಆರಂಭಿಸಿದ್ದು, ವೈದ್ಯರು ಇಲ್ಲಿ ವಿಡಿಯೋ ಕಂಟೆಂಟ್ ರೆಕಾರ್ಡ್ ಮಾಡಬಹುದು. ಆಪಲ್ AI ಡಾಕ್ಟರ್‌ಗಾಗಿ ಸೂಕ್ತ ವೈದ್ಯ ವ್ಯಕ್ತಿತ್ವವೊಂದನ್ನು ಹುಡುಕುತ್ತಿದೆ.
ಈ AI ಡಾಕ್ಟರ್ ಅಪ್ಲಿಕೇಶನ್ iOS 19.4 ನೊಂದಿಗೆ ಬಿಡುಗಡೆಯಾಗಬಹುದು ಎಂದು ವರದಿ ತಿಳಿಸಿದೆ. iOS 19 ಅನ್ನು WWDC 2025 ರಲ್ಲಿ ಘೋಷಿಸಲಾಗುವ ನಿರೀಕ್ಷೆಯಿದೆ, ಮತ್ತು ಈ ಅಪ್ಡೇಟ್ ಸೆಪ್ಟೆಂಬರ್ 2025 ರಲ್ಲಿ iPhone 17 ನೊಂದಿಗೆ ಲಭ್ಯವಾಗಬಹುದು.
ಆಪಲ್ AI ಕ್ಷೇತ್ರದಲ್ಲಿ ತನ್ನ ಪ್ರಯತ್ನಗಳನ್ನು ವೇಗಗೊಳಿಸುತ್ತಿದ್ದು, ಗೂಗಲ್ ಮತ್ತು ಸ್ಯಾಮ್ಸಂಗ್‌ನಂತಹ ಕಂಪನಿಗಳೊಂದಿಗೆ ಪೈಪೋಟಿ ನಡೆಸುತ್ತಿದೆ. WWDC 2024 ರಲ್ಲಿ iOS 18 ಮೂಲಕ AI ದೃಷ್ಟಿಯನ್ನು ಪರಿಚಯಿಸಿದರೂ, ಆ ವೇಳೆಗೆ ಗೂಗಲ್ ಮತ್ತು ಸ್ಯಾಮ್ಸಂಗ್ ಸುಧಾರಿತ ವೈಶಿಷ್ಟ್ಯಗಳನ್ನು ಪರಿಚಯಿಸಿತ್ತು.