Anekal, Bengaluru Rural : ಬನ್ನೇರುಘಟ್ಟ ಜೈವಿಕ ಉದ್ಯಾನದ (Bannerghatta Biological Park) ಸಸ್ಯಹಾರಿ ಸಫಾರಿಯಲ್ಲಿನ ಕಾಟಿ (ಭಾರತೀಯ ಕಾಡೆಮ್ಮೆ – Gaur) ಶ್ವೇತಾ ಮತ್ತು ಕುಮ್ಟಳು ತಲಾ ಒಂದೊಂದು ಕರುವಿಗೆ ಜನ್ಮ ನೀಡಿದೆ . ಈ ಎರಡು ಕರುಗಳ ಆಗಮನದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕಾಟಿಗಳ ಸಂಖ್ಯೆ 10 ಕ್ಕೇರಿದೆ ಎಂದು ಉದ್ಯಾನದ ಕಾರ್ಯ ನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.
ಭಾರತದಲ್ಲಿ ಕಾಟಿಯನ್ನು ಅಳಿವಿನಂಚಿನಲ್ಲಿರುವ ಜೀವಿಗಳೆಂದು ಗುರುತಿಸಲಾಗಿದ್ದು ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಶೆಡ್ಯೂಲ್ 1ರಡಿ ಇವು ಬರುತ್ತವೆ. ಇಂಟರ್‌ನ್ಯಾಷನಲ್ ಯುನಿಯನ್ ಫಾರ್ ಕನ್ಸರ್‌ವೇಷನ್ ಆಫ್ ನೇಚರ್ ಸಂಸ್ಥೆಯು ಇವುಗಳನ್ನು ಕೆಂಪು ಪಟ್ಟಿಗೆ ಸೇರಿಸಿದೆ. ಅಪರೂಪದ ಕಾಟಿಗಳ ಸಂರಕ್ಷಣೆಯ ನಿಟ್ಟಿನಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನದ ಸಸ್ಯಹಾರಿ ಸಫಾರಿಯಲ್ಲಿ 68 ಹೆಕ್ಟೇರ್ ವ್ಯಾಪ್ತಿಯಲ್ಲಿ ಈ ಪ್ರಾಣಿಗಳನ್ನು ಪೋಷಣೆ ಮಾಡಲಾಗುತ್ತಿದ್ದು ಜಿಂಕೆ ಮತ್ತು ಹುಲ್ಲೆಗಳು (Four Horned Antelope) ಇವುಗಳ ಜೊತೆಯಲ್ಲಿ ಉದ್ಯಾನದಲ್ಲಿವೆ ಎಂದು ತಿಳಿಸಿದ್ದಾರೆ.