Bengaluru: ಆಸ್ತಿ ತೆರಿಗೆ ಪಾವತಿಸದೆ ಇರುವ ಸುಸ್ತಿದಾರರಿಗೆ BBMP ನೋಟಿಸ್ ನೀಡಿದೆ. ತಕ್ಷಣ ಪಾವತಿ ಮಾಡದಿದ್ದರೆ, ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಚರ-ಸ್ಥಿರ ಆಸ್ತಿಗಳ ಮಾರಾಟ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ ಒಟ್ಟಾರೆ 2.75 ಲಕ್ಷ ಆಸ್ತಿ ಮಾಲೀಕರು ತೆರಿಗೆ ಪಾವತಿಸಿಲ್ಲ. ಇವರ ವಿರುದ್ಧ ಕ್ರಮಕ್ಕೆ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಆದೇಶ ನೀಡಿದ್ದಾರೆ. ತೆರಿಗೆ ಬಾಕಿ ಉಳಿಸಿಕೊಂಡವರು BBMPtax.karnataka.gov.in website ಮೂಲಕ online ನಲ್ಲಿ ಪಾವತಿಸಬೇಕೆಂದು ನೋಟಿಸಿನಲ್ಲಿ ಹೇಳಲಾಗಿದೆ.
ಮಹದೇವಪುರ ವಲಯದಲ್ಲಿ ಹೆಚ್ಚು ಮಂದಿ ತೆರಿಗೆ ಪಾವತಿಸಿಲ್ಲ. ಇಲ್ಲಿ 65,040 ಸುಸ್ತಿದಾರರು ಇದ್ದು, 197.90 ಕೋಟಿ ರೂ. ಬಾಕಿ ಇದೆ. ದಕ್ಷಿಣ ವಲಯದಲ್ಲಿ 25,162 ಸುಸ್ತಿದಾರರಿಂದ 116.81 ಕೋಟಿ ರೂ. ಬಾಕಿ ಉಳಿದಿದೆ.
ಪೂರ್ವ, ಬೊಮ್ಮನಹಳ್ಳಿ, ಯಲಹಂಕ, ಪಶ್ಚಿಮ, ರಾಜರಾಜೇಶ್ವರಿ ನಗರ ಹಾಗೂ ದಸರಹಳ್ಳಿ ವಲಯಗಳಲ್ಲಿಯೂ ಸಾಕಷ್ಟು ತೆರಿಗೆ ಪಾವತಿ ಆಗದೆ ಬಾಕಿ ಉಳಿದಿದೆ.
ನಗರದ ಎಲ್ಲಾ ವಲಯಗಳನ್ನು ಸೇರಿಸಿದಾಗ, ಬಿಬಿಎಂಪಿಗೆ 786.86 ಕೋಟಿ ರೂ. ತೆರಿಗೆ ಬಾಕಿ ಉಳಿದು ಭಾರೀ ನಷ್ಟವಾಗಿದೆ.