Bengaluru / Bangalore : ಬೆಂಗಳೂರಿನ ಕೊಳೆಗೇರಿಗಳಲ್ಲಿ ವಾಸಿಸುವ ಎರಡೂವರೆ ವರ್ಷದಿಂದ 6 ವರ್ಷದ ಅಂಚಿನಲ್ಲಿರುವ ಮಕ್ಕಳ ಆರಂಭಿಕ ಕಲಿಕೆಯನ್ನು ಅವರ ಮನೆ ಬಾಗಿಲಿಗೆ ಕೊಂಡೊಯ್ಯುವ “ವಂಡರ್ ಆನ್ ವೀಲ್ಸ್ (Wonder On Wheels)” ಕಾರ್ಯಕ್ರಮಕ್ಕೆ ಸೋಮವಾರ BBMP ಕೇಂದ್ರ ಕಛೇರಿ ಆವರಣದಲ್ಲಿ ಚಾಲನೆ ನೀಡಲಾಯಿತು.
ಫ್ರೀಥಿಂಕಿಂಗ್ ಫೌಂಡೇಷನ್ (The Freethinking Foundation) ಸಂಸ್ಥೆಯು ಬಿಬಿಎಂಪಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (Department of Women and Child Development Empowerment of Differently Abled and Senior Citizens) ಯ ಸಹಭಾಗಿತ್ವದಲ್ಲಿ ‘ವಂಡರ್ ಆನ್ ವೀಲ್ಸ್’ ಮೂಲಕ ನಗರದ ಪೂರ್ವ ವಲಯ ವ್ಯಾಪ್ತಿಯಲ್ಲಿ ಅಂಗನ ವಾಡಿಯ ಮಕ್ಕಳಿಗೆ ಆರಂಭಿಕ ಕಲಿಕೆಯನ್ನು ಅವರ ಮನೆ ಬಾಗಿಲಿಗೆ ಕೊಂಡೊಯ್ಯಲಿದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Giri Nath) “ನಾಲ್ಕು ಗೋಡೆಗಳ ಮಧ್ಯದಲ್ಲಿ ಶಾಲಾ ಶಿಕ್ಷಣವು ನಡೆಯದೆ, ಹತ್ತಿರದ ಉದ್ಯಾನದಲ್ಲಿ, ಬಸ್ಸಿನಲ್ಲಿ ಮಕ್ಕಳ ವಿದ್ಯಾಭ್ಯಾಸ ನಡೆಯಲಿದೆ. ಪಾಲಿಕೆ ವತಿಯಿಂದ ಈ ಕಾರ್ಯಕ್ರಮಕ್ಕೆ 10 ಬಸ್ಸುಗಳನ್ನು ಒದಗಿಸಿದ್ದು, ಪ್ರತಿಯೊಂದು ಬಸ್ಸಿನಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ವ್ಯವಸ್ಥೆ, ವಾಹನದಲ್ಲಿ ಇಬ್ಬರು ಶಿಕ್ಷಕಿಯರು, ಒಬ್ಬ ಗ್ರೂಪ್ ಡಿ ನೌಕರ, ಬಿಳಿ ಹಲಗೆ (White Board), ಮಕ್ಕಳಸ್ನೇಹಿ ಚಿತ್ರಗಳ ಅಳವಡಿಕೆ, ಕುಡಿಯುವ ನೀರು ಸೇರಿ ಇನ್ನಿತರೆ ಮೂಲಸೌಲಭ್ಯಗಳು ಇರಲಿವೆ. ಈ ರೀತಿ ವಿಭಿನ್ನ ವಾತಾವರಣವನ್ನು ಕಲ್ಪಿಸಿ ಅಂಗನವಾಡಿ ಮಕ್ಕಳ ಆಮೂಲಾಗ್ರ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು ಕಾರ್ಯಕ್ರಮದ ಉದ್ದೇಶವಾಗಿದ್ದು ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಹೆಚ್ಚು ಪ್ರದೇಶಗಳಿಗೆ ವಿಸ್ತರಿಸಲಾಗುತ್ತದೆ” ಎಂದು ತಿಳಿಸಿದರು.
ದಕ್ಷಿಣ ವಲಯ ವ್ಯಾಪ್ತಿಯಲ್ಲಿ May 25 ರಂದು ಫ್ರೀಥಿಂಕಿಂಗ್ ಫೌಂಡೇಷನ್ ಸಂಸ್ಥೆ ಮತ್ತು ಬಿಬಿಎಂಪಿಯ ಸಹಭಾಗಿತ್ವದಲ್ಲಿ “ಮಾಂಟೆಸ್ಸರಿ ಸ್ಕೂಲ್ ಆನ್ ವೀಲ್ಸ್ (Montessori On Wheels)” ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿತ್ತು.
ಬಿಬಿಎಂಪಿ ಶಿಕ್ಷಣ ವಿಭಾಗದ ವಿಶೇಷ ಆಯುಕ್ತ ಡಾ. ರಾಮ್ ಪ್ರಸಾದ್ ಮನೋಹರ್, ಸಹಾಯಕ ಆಯುಕ್ತರಾದ ಉಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕರಾದ ಉಷಾ, ಫ್ರೀಥಿಂಕಿಂಗ್ ಫೌಂಡೇಷನ್ ಸಂಸ್ಥೆಯ ಮುಖ್ಯಸ್ಥರಾದ ಸುನೋಜ್ ಫಿಲಿಫ್ ಮತ್ತಿತರರು ಉಪಸ್ಥಿತರಿದ್ದರು.