ದೆಹಲಿಯ (Delhi) ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆ (Bomb threat) ಬಂದಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆತಂಕಕ್ಕೊಳಗಾಗಿದ್ದಾರೆ. ಇದು ವಾರದಲ್ಲಿ ಸಂಭವಿಸಿದ ಎರಡನೇ ಘಟನೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಶೋಧ ನಡೆಸಿ, ಅನುಮಾನಾಸ್ಪದ ಏನೂ ಕಂಡುಬಂದಿಲ್ಲ.
ಆರಂಭದಲ್ಲಿ ದೆಹಲಿಯ 44 ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಬೆದರಿಕೆ ಕೊಟ್ಟವರು 30,000 ಯುಎಸ್ ಡಾಲರ್ ಬೇಡಿಕೆ ಇಟ್ಟಿದ್ದರು. ಪರಿಶೀಲನೆ ಬಳಿಕ, ಇದು ಸುಳ್ಳು ಬೆದರಿಕೆ ಎಂಬುದು ತಿಳಿದುಬಂದಿತ್ತು.
ಮೇ ತಿಂಗಳಲ್ಲಿ ದೆಹಲಿಯ 200 ಕ್ಕೂ ಹೆಚ್ಚು ಶಾಲೆಗಳು, ಆಸ್ಪತ್ರೆಗಳು ಮತ್ತು ಸರ್ಕಾರಿ ಕಟ್ಟಡಗಳು ಇಂತಹ ಬೆದರಿಕೆಗಳನ್ನು ಎದುರಿಸಿವೆ. ಮೇಳ್ ವೀಪಿಎನ್ ಮೂಲಕ ಕಳುಹಿಸಿರುವುದರಿಂದ ಪ್ರಕರಣವನ್ನು ಈವರೆಗೆ ಪರಿಹರಿಸಲು ಸಾಧ್ಯವಾಗಿಲ್ಲ.
ಅಗ್ನಿಶಾಮಕ ದಳ, ಶ್ವಾನ ದಳ ಮತ್ತು ಬಾಂಬ್ ಪತ್ತೆ ಘಟಕಗಳು ಸ್ಥಳಕ್ಕೆ ಆಗಮಿಸಿ ಸಂಪೂರ್ಣ ತಪಾಸಣೆ ನಡೆಸುತ್ತಿವೆ. ಪೋಷಕರಿಗೆ ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ಸೂಚನೆ ನೀಡಲಾಗಿದೆ.
ದೆಹಲಿ ಮುಖ್ಯಮಂತ್ರಿ ಅತಿಶಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಬಿಜೆಪಿ ಆಡಳಿತದ ಕೇಂದ್ರ ಸರ್ಕಾರ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿ ಇಷ್ಟು ಕೆಟ್ಟ ಮಟ್ಟದಲ್ಲಿ ಇರುವುದು ದುರದೃಷ್ಟಕರವೆಂದಿದ್ದಾರೆ.