Bengaluru: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಅವರನ್ನು ದುಷ್ಕರ್ಮಿಗಳು ನಡು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಭೀಕರವಾಗಿ ಹತ್ಯೆ ಮಾಡಿರುವುದು ರಾಜ್ಯವನ್ನು ಕಂಗೆಡಿಸಿದೆ.
ಈ ಘಟನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BSY) ಪ್ರತಿಕ್ರಿಯಿಸಿ, “ಇದು ಅತ್ಯಂತ ಆಘಾತಕಾರಿ. ದುಷ್ಕರ್ಮಿಗಳಿಗೆ ಕಾನೂನಿನ ಭಯವೇ ಇಲ್ಲ. ಇಂತಹ ಘಟನೆಗಳು ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದನ್ನು ತೋರಿಸುತ್ತವೆ. ಸರ್ಕಾರ ಕೂಡಲೇ ಅಪರಾಧಿಗಳನ್ನು ಬಂಧಿಸಬೇಕು” ಎಂದು ಹೇಳಿದ್ದಾರೆ.
ಅವರ ಜೊತೆಗೆ ಮತ್ತೊಬ್ಬ ಹಿಂದೂ ಕಾರ್ಯಕರ್ತ ಕೂಡ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಡಿಯೂರಪ್ಪ ಅವರು ಆ ವ್ಯಕ್ತಿ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದು, ಸುಹಾಸ್ ಅವರ ಕುಟುಂಬಕ್ಕೆ ಸಮಾಧಾನ ಸಿಗಲೆಂದು ಸಂತಾಪ ಸೂಚಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಈ ಘಟನೆ ಕುರಿತು ಕಿಡಿಕಾರಿದ್ದಾರೆ. “ಗೋಂಡಾ ಮತ್ತು ಸಮಾಜವಿರೋಧಿ ಶಕ್ತಿಗಳು ರಾಜ್ಯದಲ್ಲಿ ಕೊಲೆ, ದೌರ್ಜನ್ಯ, ಸುಲಿಗೆ ಮಾಡುತ್ತಲೇ ಇರುತ್ತಿದ್ದಾರೆ. ಸುಹಾಸ್ ಶೆಟ್ಟಿ ಹತ್ಯೆ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ. ಇದು ಪೂರ್ವನಿಯೋಜಿತ ಕೊಲೆ ಎಂಬುದು ಸ್ಪಷ್ಟವಾಗಿದೆ. ಇದು ಕಾನೂನು ವ್ಯವಸ್ಥೆಯ ವೈಫಲ್ಯವೋ ಅಥವಾ ಗುಪ್ತಚರ ಇಲಾಖೆ ವಿಫಲವಾದ ಫಲಿತಾಂಶವೋ ಎಂಬುದರ ಕುರಿತು ತನಿಖೆ ಅಗತ್ಯವಾಗಿದೆ” ಎಂದು ಅವರು ಹೇಳಿದ್ದಾರೆ.
ಅವರು ಮುಂದುವರೆದು, “ಕಾಶ್ಮೀರದಲ್ಲಿ ನಡೆದ ಪ್ರವಾಸಿಗರ ಹತ್ಯೆ ಮಾಸುವ ಮುನ್ನವೇ ಕರ್ನಾಟಕದಲ್ಲಿ ಮಂಗಳೂರು ಘಟನೆಯು ನಡೆದಿದ್ದು, ರಾಜ್ಯದಲ್ಲಿ ಕಾಶ್ಮೀರದಂತಹ ಪರಿಸ್ಥಿತಿಯೆನ್ನಿಸುತ್ತದೆ. ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನೋಡಿದರೆ ಜನತೆ ಆತಂಕಿತರಾಗುತ್ತಿದ್ದಾರೆ. ರಾಜ್ಯಪಾಲರು ಮಧ್ಯಪ್ರವೇಶಿಸಿ ಕಾನೂನು ಸುವ್ಯವಸ್ಥೆ ಸಮರ್ಥವಾಗಿ ನಡೆಯುವಂತೆ ಗಮನಹರಿಸಬೇಕು” ಎಂದು ಒತ್ತಾಯಿಸಿದ್ದಾರೆ.