
Mangaluru: ಅನ್ಯ ಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗುವಂತೆ ಹಿಂದೂ ಯುವಕರಿಗೆ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಕರೆ ನೀಡಿದ್ಧಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುತ್ತಾರಿನಲ್ಲಿ ನಡೆದ ವಿಹೆಚ್ಪಿ (VHP) ಯ “ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ” ಪಾದಯಾತ್ರೆಯ ಸಮಾರೋಪದಲ್ಲಿ ಅವರು ಮಾತನಾಡಿದರು.
“ಎಷ್ಟು ದಿನ ನಮ್ಮ ಹೆಣ್ಣುಮಕ್ಕಳ ಬಗ್ಗೆ ಮಾತ್ರ ಚಿಂತಿಸುತ್ತೀರಾ? ನಮ್ಮ ಗಂಡುಮಕ್ಕಳಿಗೂ ಧೈರ್ಯ ತುಂಬಬೇಕು. ಲವ್ ಜಿಹಾದ್ ಬಗ್ಗೆ ಮಾತ್ರ ಮಾತಾಡುವುದು ಸಾಕು, ಬದಲಾವಣೆ ತರೋಣ. ಈಗ ಹಿಂದೂ ಯುವತಿಯರು ಎಚ್ಚೆತ್ತುಕೊಂಡಿದ್ದಾರೆ. ಆದರೆ, ಮತ್ತೆ ಹೆಸರನ್ನು ಹಿಂದೂಗಳಂತೆ ಬದಲಾಯಿಸಿ ಮತಾಂತರ ಮಾಡಲಾಗುತ್ತಿದೆ,” ಎಂದು ಸೂಲಿಬೆಲೆ ಆರೋಪಿಸಿದರು.
ಹಾಗೆಯೇ, ಕೆಲ ರಾಜ್ಯಗಳಲ್ಲಿ ಮುಸ್ಲಿಂ ಯುವಕರು ಹಿಂದೂ ಹೆಣ್ಣುಮಕ್ಕಳನ್ನು ಓಲೈಸಿ ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪವೂ ಅವರು ಮಾಡಿದರು.
ಸೂಲಿಬೆಲೆ ಭಾಷಣಕ್ಕೆ ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. “ಯಾರನ್ನು ಬೇಕಾದರೂ ಮದುವೆಯಾಗಲು ಸಂವಿಧಾನ ಹಕ್ಕು ನೀಡಿದೆ. ಕೋಮು ದ್ವೇಷ ಹುಟ್ಟಿಸಲು ಸೂಲಿಬೆಲೆ ಈ ಹೇಳಿಕೆ ನೀಡಿದ್ದಾರೆ. ಶಾಂತಿದಾಯಕ ಪರಿಸ್ಥಿತಿಯನ್ನು ಕೆಡಿಸಲು ಇದು ಯತ್ನವಾಗಿದೆ. ಪೊಲೀಸರಿಗೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡುತ್ತೇವೆ,” ಎಂದು ಅವರು ಹೇಳಿದ್ದಾರೆ.
ಮುನೀರ್ ಕಾಟಿಪಳ್ಳ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿ, “ಸೂಲಿಬೆಲೆ ಬುದ್ಧಿ ಹೇಳುವಂತ ಪರಿಸ್ಥಿತಿ ನಮ್ಮ ಯುವಕರಿಗೆ ಇಲ್ಲ. ಉದ್ಯೋಗ ಇಲ್ಲದ ಕಾರಣ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ. ಸರ್ಕಾರವನ್ನು ಒತ್ತಾಯಿಸಿ, ಉದ್ಯೋಗ ಅವಕಾಶ ಹೆಚ್ಚಿಸುವ ಕೆಲಸ ಮಾಡಲಿ,” ಎಂದಿದ್ದಾರೆ.