Chikkaballapur : ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಮತಾಂತರ ನಿಷೇಧ ಕಾಯ್ದೆ (Anti Conversion Bill) ವಿರೋಧಿಸಿ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಯಿತು.
ಚಿಕ್ಕಬಳ್ಳಾಪುರ
ಸರ್ಕಾರ ಉದ್ದೇಶಿತ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಬಾರದು ಎಂದು CPM ಕಾರ್ಯಕರ್ತರು ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತದಲ್ಲಿ ಬುಧವಾರ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ “ಮತಾಂತರ ನಿಷೇಧ ಕಾಯ್ದೆ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಆಗುವುದನ್ನು ತಡೆಯುವ ಉದ್ದೇಶವನ್ನು ಹೊಂದಿದೆ ಎಂದು ಸರ್ಕಾರ ಹೇಳಿಕೊಂಡಿದ್ದು ವಾಸ್ತವವಾಗಿ ಮಸೂದೆ ಸಂವಿಧಾನ ಬದ್ಧ ಹಕ್ಕನ್ನು ಕಿತ್ತುಕೊಳ್ಳುವ ಸರ್ವಾಧಿಕಾರಿ ಕ್ರಮವಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಪ್ರಜೆಗೂ ತನಗೆ ಇಷ್ಟ ಬಂದ ಮತವನ್ನು ಅನುಸರಿಸುವ ಹಾಗೂ ಯಾವುದೇ ಧರ್ಮದ ವಿಚಾರಗಳನ್ನು ಪ್ರಚಾರ ಮಾಡುವ ಸ್ವಾತಂತ್ರ್ಯ ಹೊಂದಿರುತ್ತದೆ. ಈ ಮಸೂದೆಯಿಂದ ಬಿಜೆಪಿ ಸರ್ಕಾರ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿಯುವ ಹೊನ್ನಾರ ನಡೆಸುತ್ತಿದೆ ಹಾಗೂ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಮೂಲಭೂತ ಹಕ್ಕನ್ನು ಕಸಿಯುವ ಸಂವಿಧಾನ ವಿರೋಧಿ ಕ್ರಮವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಬಿ.ಎನ್.ಮುನಿಕೃಷ್ಣಪ್ಪ, ಜಿಲ್ಲಾ ಸಮಿತಿ ಸದಸ್ಯರಾದ ಬಿ.ಸಾವಿತ್ರಮ್ಮ, ಹಳ್ಳಿ ಮಕ್ಕಳ ಸಂಘದ ಉಪಾಧ್ಯಕ್ಷ ವೆಂಕಟರಮಣಪ್ಪ, ಮುಬಾರಕ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಗೌರಿಬಿದನೂರು
ಸಂವಿಧಾನ ವಿರೋಧಿ ಮತಾಂತರ ನಿಷೇಧ ಕಾಯ್ದೆ ಕೈಬಿಡಬೇಕೆಂದು CPI(M) ತಾಲ್ಲೂಕು ಕಾರ್ಯದರ್ಶಿ ಜಿ.ಸಿದ್ದಗಂಗಪ್ಪ ಬುಧವಾರ ತಹಸೀಲ್ದಾರ್ ವೆಂಕಟರಾವ್ ಅವರಿಗೆ ಮನವಿ ಪತ್ರ ನೀಡಿದ್ದರು.
ಬಾಗೇಪಲ್ಲಿ
ಮತಾಂತರ ನಿಷೇಧ ಕಾಯ್ದೆ ಕೈಬಿಡಬೇಕು ಎಂದು ಆಗ್ರಹಿಸಿ CPM (ಮಾರ್ಕ್ಸ್ ವಾದಿ) ತಾಲ್ಲೂಕು ಸಮಿತಿ ಹಾಗೂ ಕ್ರೈಸ್ತ ಸಮುದಾಯದ ಮುಖಂಡರು ಬುಧವಾರ ಬಾಗೇಪಲ್ಲಿ ಪಟ್ಟಣದ ಸುಂದರಯ್ಯ ಭವನದಿಂದ ಮೆರವಣಿಗೆ ಹೊರಟು ಮುಖ್ಯರಸ್ತೆಗಳಲ್ಲಿ ಸಂಚರಿಸಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ನಂತರ ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಸುಬ್ರಮಣ್ಯಂ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ನಗರ ಸಮಿತಿ ಕಾರ್ಯದರ್ಶಿ ಅಶ್ವಥ್ಥಪ್ಪ, ಮುಖಂಡರಾದ ಎಚ್.ಎ. ರಾಮಲಿಂಗಪ್ಪ, ಶ್ರೀರಾಮನಾಯಕ್, ಮುಸ್ತಾಫ, ಕೆ.ನಾಗರಾಜ್, ಜಿ.ಕೃಷ್ಣಪ್ಪ, ಬಿ.ಎಚ್.ರಫೀಕ್, ಕ್ರೈಸ್ತ ಸಮುದಾಯದ ಮುಖಂಡರಾದ ಎಂ.ಮಲ್ಲನ್ನ, ಯೇಸುರತ್ನಂ, ಎಚ್.ಎಸ್.ಪ್ರಕಾಶ್, ರಾಜಗೋಪಾಲ್, ನಾರಾಯಣಸ್ವಾಮಿ, ಆದಿನಾರಾಯಣಪ್ಪ, ಚಂದ್ರ ಮತಿತ್ತರರು ಭಾಗವಹಿಸಿದ್ದರು