New Delhi: ಡಾನಾ ಚಂಡಮಾರುತದಿಂದ (Cyclone Dana) ರಕ್ಷಣೆಗೆ ಸಕಲ ಸಿದ್ಧತೆಗಳು (Heavy Rain Alert) ಪೂರ್ಣಗೊಂಡಿವೆ. ಒಡಿಶಾದಲ್ಲಿ NDRFನ 288 ತಂಡಗಳನ್ನು ನಿಯೋಜಿಸಲಾಗಿದ್ದು, ಇದಲ್ಲದೇ ಒಡಿಶಾ (Odisha) ರಾಜ್ಯದ 14 ಜಿಲ್ಲೆಗಳಿಂದ 10 ಲಕ್ಷ ಜನರನ್ನು ಸುರಕ್ಷಿತ ಶಿಬಿರಗಳಿಗೆ ರವಾನಿಸಲಾಗುತ್ತಿದೆ.
ಈ ಚಂಡಮಾರುತದ ಪರಿಣಾಮವು ಒಡಿಶಾದಿಂದ ಬಂಗಾಳ, ಬಿಹಾರ ಮತ್ತು ಜಾರ್ಖಂಡ್ನಲ್ಲಿ ಗೋಚರಿಸಲಿದೆ. ಕರ್ನಾಟಕಕ್ಕೂ ತಕ್ಕ ಮಟ್ಟಿಗೆ ಪರಿಣಾಮ ಬೀರಲಿದೆ.
ಈ ಚಂಡಮಾರುತವು ರಾಷ್ಟ್ರೀಯ ಉದ್ಯಾನವನ ಮತ್ತು ಧಮ್ರಾ ಬಂದರಿನ ನಡುವೆ ಮೇಲ್ಮೈಗೆ ಅಪ್ಪಳಿಸಬಹುದು. ಹವಾಮಾನ ಇಲಾಖೆ ಪ್ರಕಾರ, ಈ ಚಂಡಮಾರುತವು ಗಂಟೆಗೆ 150 ಕಿಲೋಮೀಟರ್ ವೇಗದಲ್ಲಿ ಒಡಿಶಾ ಕಡೆಗೆ ಬರುತ್ತಿದೆ.
ಕೋಸ್ಟ್ ಗಾರ್ಡ್ ತನ್ನ ವಿಶೇಷ ವಿಪತ್ತು ಪರಿಹಾರ ತಂಡದೊಂದಿಗೆ ಹೆಚ್ಚಿನ ಅಲರ್ಟ್ನಲ್ಲಿದ್ದು, ನೆರವು, ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಒದಗಿಸಲು ಸಿದ್ಧವಾಗಿದೆ ಎಂದು ಹೇಳಿಕೆ ತಿಳಿಸಿದೆ.
‘ಅಕ್ಟೋಬರ್ 24-25 ರಂದು ಡಾನಾ ಚಂಡಮಾರುತವು ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕರಾವಳಿಯನ್ನು ತಲುಪುವ ನಿರೀಕ್ಷೆಯಿದೆ, ಕರಾವಳಿ ರಕ್ಷಣಾ ಪ್ರದೇಶ (ಈಶಾನ್ಯ) ಸಮುದ್ರದಲ್ಲಿ ಜೀವ ಮತ್ತು ಆಸ್ತಿಯ ಸುರಕ್ಷತೆಗಾಗಿ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ.
ಡಾನಾ ಚಂಡಮಾರುತವನ್ನು ಗಮನದಲ್ಲಿಟ್ಟುಕೊಂಡು, ಪೂರ್ವ ರೈಲ್ವೇ ತನ್ನ ಸೀಲ್ದಾ ವಿಭಾಗದಲ್ಲಿ ಗುರುವಾರ ರಾತ್ರಿ 8 ರಿಂದ ಶುಕ್ರವಾರ ಬೆಳಿಗ್ಗೆ 10 ರವರೆಗೆ 190 ಸ್ಥಳೀಯ ರೈಲುಗಳನ್ನು ಸ್ಥಗಿತಗೊಳಿಸಿದೆ. ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದಾರೆ.
ರೈಲ್ವೆ ಪ್ರಯಾಣಿಕರ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಸೀಲ್ದಾ ಸೌತ್ ಮತ್ತು ಹಸ್ನಾಬಾದ್ ವಿಭಾಗಗಳಲ್ಲಿ 190 ರೈಲುಗಳನ್ನು ರದ್ದುಗೊಳಿಸಲಾಗುವುದು ಎಂದು ಪೂರ್ವ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಒಡಿಶಾ ಸರ್ಕಾರ (Odisha government) ವಿಪತ್ತು ಪರಿಹಾರ ಪಡೆಗಳನ್ನು ನಿಯೋಜಿಸುವ ಸಂದರ್ಭದಲ್ಲಿ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲು ನಿರ್ಧರಿಸಿದೆ. ಇದಲ್ಲದೇ ಎಲ್ಲಾ ಸರ್ಕಾರಿ ನೌಕರರ ರಜೆಯನ್ನು ರದ್ದುಗೊಳಿಸಲಾಗಿದೆ. ಪ್ರವಾಸಿಗರು ಬೀಚ್ ಕಡೆಗೆ ಹೋಗುವುದನ್ನು ನಿಷೇಧಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬೀಚ್ಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.