Ankara: ಟರ್ಕಿ (Turkey) ರಾಜಧಾನಿ ಅಂಕಾರದಲ್ಲಿರುವ ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಕಂಪನಿಯ (Aerospace company) ಘಟಕವೊಂದರ ಮೇಲೆ ಬುಧವಾರ ಭಯೋತ್ಪಾದಕರ ದಾಳಿ (Terrorist Attack) ನಡೆದಿದೆ.
ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಟರ್ಕಿ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿ ದಾಳಿಕೋರ ಇಬ್ಬರು ಉಗ್ರರನ್ನು ಹೊಡೆದುರುಳಿಸಿವೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಭೀತಿ ಇದೆ.
ಕುರ್ದಿಶ್ ಉಗ್ರಗಾಮಿಗಳು (Kurdish Militants) ಏರೋಸ್ಪೇಸ್ ಕಚೇರಿ ಮೇಲೆ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿರುವುದು ವಿಶೇಷ. ರಕ್ಷಣಾ ಕಂಪನಿಯ ಮೇಲಿನ ದಾಳಿಯ ಹಿಂದೆ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ ಅಥವಾ ಪಿಕೆಕೆ ಕೈವಾಡವಿದೆ ಟರ್ಕಿ ರಕ್ಷಣಾ ಸಚಿವ ಯಾಸರ್ ಗುಲೇರ್ ಹೇಳಿದ್ದಾರೆ.
ಇರಾಕ್‌ನಲ್ಲಿ ನೆಲೆ ಹೊಂದಿರುವ ಪಿಕೆಕೆ ಮತ್ತು ಸಿರಿಯಾದಲ್ಲಿರುವ ಕುರ್ದಿಶ್ ಉಗ್ರರ ಮೇಲೆ ಟರ್ಕಿ ನಿಯಮಿತವಾಗಿ ವಾಯುದಾಳಿಗಳನ್ನು ನಡೆಸಿಕೊಂಡೇ ಬಂದಿದೆ. ಕೊನೆಯ ಉಗ್ರನನ್ನು ನಿರ್ಮೂಲನೆ ಮಾಡುವರೆಗೂ ನಾವು ದಾಳಿ ನಡೆಸುತ್ತೇವೆ ಎಂದು ಗುಲೇರ್ ತಿಳಿಸಿದ್ದಾರೆ.
”ಟರ್ಕಿಶ್ ಏರೋಸ್ಪೇಸ್ ಇಂಡಸ್ಟ್ರೀಸ್‌ನ ಘಟಕದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿಮೂವರು ಮೃತಪಟ್ಟಿದ್ದಾರೆ. ಅನೇಕ ಜನರು ಗಾಯಗೊಂಡಿದ್ದಾರೆ,” ಎಂದು ಟರ್ಕಿಯ ಗೃಹ ಸಚಿವ ಅಲಿ ಯೆರ್ಲಿಕಾಯಾ ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ಅವರಿಗೆ ಕರೆ ಮಾಡಿ, ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ.