
ಅಪೋಫಿಸ್ ನಂತರ ಮತ್ತೊಂದು ಅಪಾಯಕಾರಿ ಕ್ಷುದ್ರಗ್ರಹ (Asteroid) ಭೂಮಿಯ ಸಮೀಪಕ್ಕೆ ಬರುತ್ತಿದೆ. 2024 YR4 ಎಂದು ಹೆಸರಿಡಲಾದ ಈ ಕ್ಷುದ್ರಗ್ರಹ 2032ರ ಡಿಸೆಂಬರ್ 22ರಂದು ಭೂಮಿಗೆ ಹತ್ತಿರವಾಗಲಿದೆ. ಡಿಕ್ಕಿ ಹೊಡೆಯುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಆರ್ಯಭಟ ವೀಕ್ಷಣಾ ವಿಜ್ಞಾನ ಸಂಶೋಧನಾ ಸಂಸ್ಥೆಯ (ARIES) ಹಿರಿಯ ಖಗೋಳಶಾಸ್ತ್ರಜ್ಞ ಡಾ. ಶಶಿಭೂಷಣ್ ಪಾಂಡೆ ಅವರ ಪ್ರಕಾರ, 2024 YR4 ಅಪೋಫಿಸ್ ನಷ್ಟು ದೊಡ್ಡದಿಲ್ಲ. ಆದರೆ, ಭೂಮಿಗೆ ಡಿಕ್ಕಿ ಹೊಡೆದರೆ ದೊಡ್ಡ ಮಟ್ಟದ ಹಾನಿ ಸಂಭವಿಸಬಹುದು. ಈ ಕ್ಷುದ್ರಗ್ರಹದ ಚಲನೆ ಕುರಿತು ವಿಜ್ಞಾನಿಗಳು ನಿಗಾ ವಹಿಸಿದ್ದಾರೆ.
ಇಂಪ್ಯಾಕ್ಟ್ ಲಾಸ್ಟ್ ಅಲರ್ಟ್ ಸಿಸ್ಟಮ್ ಸ್ಟೇಷನ್ 2024ರಲ್ಲಿ ಈ ಕ್ಷುದ್ರಗ್ರಹವನ್ನು ಪತ್ತೆ ಮಾಡಿದ್ದು, ಅನಂತರದಿಂದಲೇ ನಿರಂತರ ಅಧ್ಯಯನ ನಡೆಯುತ್ತಿದೆ. 150 ಅಡಿ ಅಗಲವಿರುವ ಈ ಕ್ಷುದ್ರಗ್ರಹ ಭೂಮಿಗೆ ಅಪಾಯಕಾರಿಯಾಗಬಹುದಾದ ಸಾಧ್ಯತೆ ಶೇ. 2.3ಕ್ಕೆ ಏರಿಕೆಯಾಗಿದೆ.
ಚೀನಾ ಈ ಕ್ಷುದ್ರಗ್ರಹದ ಮೇಲ್ವಿಚಾರಣೆಗಾಗಿ ತಜ್ಞರ ತಂಡವನ್ನು ನೇಮಕ ಮಾಡುತ್ತಿದೆ. 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ 24 ಕ್ಷುದ್ರಗ್ರಹಗಳು ಭೂಮಿಯ ಹತ್ತಿರ ಹಾದು ಹೋಗಲಿವೆ. ಪೈಕಿ ಮೂರು ಅಪಾಯಕಾರಿ ಕ್ಷುದ್ರಗ್ರಹಗಳಿವೆ, ಅವುಗಳಲ್ಲಿ ಎರಡು ಈಗಾಗಲೇ ಹಾದು ಹೋಗಿವೆ, ಮತ್ತು ಮೂರನೇದು ಮಾರ್ಚ್ 21ರಂದು ಹಾದು ಹೋಗಲಿದೆ. ವಿಜ್ಞಾನಿಗಳು ಭೂಮಿಗೆ ಯಾವುದೇ ತಕ್ಷಣದ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ, ಆದರೆ ನಿಗಾ ಮುಂದುವರಿಸುತ್ತಿದ್ದಾರೆ.
10 ಮೀಟರ್ ಗಾತ್ರದ ಕ್ಷುದ್ರಗ್ರಹಗಳು ಭೂಮಿಗೆ ಡಿಕ್ಕಿ ಹೊಡೆಯಬಹುದು, ಆದರೆ ವಾತಾವರಣ ಪ್ರವೇಶಿಸಿದಾಗ ಸುಟ್ಟುಹೋಗುವ ಸಾಧ್ಯತೆ ಹೆಚ್ಚು. ಭೂಮಿಯ ವಾತಾವರಣವು ಈ ಕ್ಷುದ್ರಗ್ರಹಗಳಿಂದ ರಕ್ಷಣೆ ನೀಡುತ್ತದೆ