ರೇಣುಕಾ ಸ್ವಾಮಿ ಕೊಲೆ ಆರೋಪದ ಮೇಲೆ ಕಳೆದ ಜೈಲಿನಲ್ಲಿ ದಿನ ದೂಡುತ್ತಿದ್ದ ದರ್ಶನ್ಗೆ (Darshan) ಕರ್ನಾಟಕ ಹೈಕೋರ್ಟ್ (Karnataka High Court) ಮಧ್ಯಂತರ ಜಾಮೀನು (interim bail) ಮಂಜೂರು ಮಾಡಿದೆ.
ದರ್ಶನ್ರ ಆರೋಗ್ಯ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಆರು ವಾರಗಳ ಅವಧಿಯ ಮಧ್ಯಂತರ ಜಾಮೀನು ನೀಡಲಾಗಿದ್ದು, ಮಧ್ಯಂತರ ಜಾಮೀನಿಗೆ ಸಾಕಷ್ಟು ಷರತ್ತುಗಳನ್ನು ಮಾನ್ಯ ನ್ಯಾಯಾಲಯ ವಿಧಿಸಿದೆ.
ಈ ಹಿಂದೆ ದರ್ಶನ್ರ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಬಳಿಕ ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಹೈಕೋರ್ಟ್ನಲ್ಲಿ ಅರ್ಜಿ ಹಾಕಿದ್ದರು. ಹೈಕೋರ್ಟ್ನಲ್ಲಿ ದರ್ಶನ್ ಆರೋಗ್ಯ ಸಮಸ್ಯೆಯನ್ನು ಪ್ರಮುಖ ಕಾರಣವಾಗಿ ಪರಿಗಣಿಸಿ ಜಾಮೀನು ನೀಡುವಂತೆ ಮನವಿ ಮಾಡಲಾಗಿತ್ತು.
ಎರಡೂ ಕಡೆಯ ವಾದ ಆಲಿಸಿದ ನ್ಯಾಯಮೂರ್ತಿ ವಿಶ್ವೇಶ್ವರ ಭಟ್ ಅವರು, ‘ವೈದ್ಯಕೀಯ ಚಿಕಿತ್ಸೆ ವಿಚಾರಣಾಧೀನ ಕೈದಿಯ ಹಕ್ಕು’ ಎಂದು ಉಲ್ಲೇಖಿಸಿ ಇದೀಗ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದಾರೆ.
ಆದರೆ ಆರು ವಾರಗಳ ಮಧ್ಯಂತರ ಜಾಮೀನು ಇದಾಗಿದ್ದು, ಎಸ್ಪಿಪಿ ಮನವಿ ಮೇರೆಗೆ ಪಾಸ್ಪೋರ್ಟ್ ವಶಕ್ಕೆ ನೀಡುವಂತೆ ಸೂಚಿಸಲಾಗಿದೆ. ಇದರ ಜೊತೆಗೆ ದರ್ಶನ್ ಇಚ್ಛಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.
ಒಂದು ವಾರದ ಒಳಗಾಗಿ ನ್ಯಾಯಾಲಯಕ್ಕೆ ಚಿಕಿತ್ಸೆಯ ವಿವರಗಳನ್ನು ಸಲ್ಲಿಸಬೇಕಿದೆ ಎಂದು ಮಾನ್ಯ ನ್ಯಾಯಾಲಯ ಹೇಳಿದೆ.