New Delhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮಾಡಿದ ಮತ ಕಳ್ಳತನದ ಆರೋಪವು ಸರಿಯಲ್ಲ ಎಂದು ಚುನಾವಣಾ ಆಯೋಗ (Election Commission) ಸ್ಪಷ್ಟಪಡಿಸಿದೆ. ಇಂಡಿಯಾ ಒಕ್ಕೂಟದ ಆರೋಪಗಳ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಲಾಗಿದೆ.
ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಮತ್ತು ಮತ ಕಳವು ಆರೋಪದ ಕುರಿತು ಸೋಮವಾರ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟದ ನಾಯಕರು ಪ್ರತಿಭಟನೆ ನಡೆಸಿದ್ದರು.
ಚುನಾವಣಾ ಆಯೋಗವು ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪಾರದರ್ಶಕವಾಗಿ ನಡೆದಿರುವುದನ್ನು ತೋರಿಸುವ ದಾಖಲೆಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ವಿಡಿಯೋ ಸಾಕ್ಷಿಗಳನ್ನು ಹಂಚಿಕೊಂಡಿದೆ. ಕರಡು ಮತದಾರರ ಪಟ್ಟಿ ಪ್ರಕಟಿಸುವ ಮೊದಲು ಮತ್ತು ನಂತರ ನಡೆದ ಸಭೆಗಳ ವಿವರಗಳನ್ನೂ ಬಿಡುಗಡೆ ಮಾಡಿದೆ.
ಆಯೋಗದ ಪ್ರಕಾರ, ಕ್ಷೇತ್ರ ಮಟ್ಟದಲ್ಲಿ ಎಸ್ಐಆರ್ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕತೆಯೊಂದಿಗೆ ನಡೆದಿದ್ದು, ಶುದ್ಧ ಮತದಾರರ ಪಟ್ಟಿಗಳು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತವೆ. ಕರಡು ಪಟ್ಟಿ ಪ್ರಕಟವಾದ ದಿನದಿಂದಲೇ ದೈನಂದಿನ ಬುಲೆಟಿನ್ ಲಿಂಕ್‌ಗಳನ್ನು ಹಂಚಲಾಗಿದೆ.