FDA ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮದ ಪ್ರಮುಖ ಆರೋಪಿಯಾಗಿರುವ RD ಪಾಟೀಲ್ (ರುದ್ರಗೌಡ ಪಾಟೀಲ್)ಗೆ ಸುಪ್ರೀಂ ಕೋರ್ಟ್ (Supreme Court) ಜಾಮೀನು ನಿರಾಕರಿಸಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಪಾಟೀಲ್ ಗೆ ನ್ಯಾ. ಬಿಆರ್. ಗವಾಯಿ ನೇತೃತ್ವದ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದೆ.
2023ರ ಅಕ್ಟೋಬರ್ 28ರಂದು ಕರ್ನಾಟಕದ ವಿವಿಧ ಕೇಂದ್ರಗಳಲ್ಲಿ FDA ನೇಮಕಾತಿ ಪರೀಕ್ಷೆಗಳು ನಡೆದವು. ಕಲಬುರಗಿಯ ಶ್ರೀ ಶರಣಬಸವೇಶ್ವರ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಕೆಲವು ಅಭ್ಯರ್ಥಿಗಳು ಬ್ಲೂಟೂತ್ ಬಳಸಿ ನಕಲು ಮಾಡಿದ ವೇಳೆ ಸಿಕ್ಕಿಬಿದ್ದಿದ್ದರು. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಪಿಎಸ್‌ಐ ಪರೀಕ್ಷೆ ಹಗರಣದಲ್ಲಿ ಕೂಡ ಆರ್ಡಿ ಪಾಟೀಲ್ ಪ್ರಮುಖ ಆರೋಪಿಯಾಗಿದ್ದಾನೆ. ಆತನನ್ನು ಬಂಧಿಸಿ ಪ್ರಕರಣವನ್ನು ಸಿಐಡಿಗೆ ವಹಿಸಲಾಯಿತು. ಪಿಎಸ್ಐ ಪರೀಕ್ಷೆಯಲ್ಲಿಯೂ ಪಾಟೀಲ್ ಪ್ರಮುಖ ಆರೋಪಿಯಾಗಿದ್ದು, ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ಬ್ಲೂಟೂತ್ ಮೂಲಕ ಉತ್ತರಗಳನ್ನು ಕಳುಹಿಸುತ್ತಿದ್ದ ಎಂಬ ಆರೋಪವಿದೆ.
ಪಾಟೀಲ್ ಮನೆಯಲ್ಲಿ ಒಎಂಆರ್ ಶೀಟ್‌ಗಳು, ಹಾಲ್ ಟಿಕೆಟ್‌ಗಳು ಹಾಗೂ FDA, SDA ಪರೀಕ್ಷೆಗಳ ದಾಖಲೆಗಳು ಪತ್ತೆಯಾಗಿವೆ. ಈ ಅಕ್ರಮ ಕರ್ನಾಟಕದ ರಾಜಕೀಯದ ಮಧ್ಯೆ ಕೋಲಾಹಲವನ್ನು ಉಂಟುಮಾಡಿತು. ಕಲಬುರಗಿಯಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ವಿರೋಧಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದವು.