ಭಾರತದಲ್ಲಿ ನಿರ್ಮಾಣವಾಗುತ್ತಿರುವ ರುದ್ರಂ ಕ್ಷಿಪಣಿಗಳು (Rudram missiles) ಈಗ ಯುರೋಪಿನ ಗ್ರೀಸ್ ದೇಶದ ಗಮನ ಸೆಳೆಯುತ್ತಿವೆ. ಟರ್ಕಿಯ ವಿರುದ್ಧ ಚಟುವಟಿಕೆಯಲ್ಲಿ ತೊಡಗಿರುವ ಗ್ರೀಸ್, ಶಕ್ತಿಶಾಲಿಯಾದ ARM (Anti-Radar Missile) ಕ್ಷಿಪಣಿಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ, ಭಾರತ ಅಭಿವೃದ್ಧಿಪಡಿಸಿದ ರುದ್ರಂ-1 ಮತ್ತು ರುದ್ರಂ-2 ಕ್ಷಿಪಣಿಗಳ ಖರೀದಿಗೆ ಗ್ರೀಸ್ ಆಸಕ್ತಿ ತೋರಿಸಿದೆ.
ಪಾಕಿಸ್ತಾನದ ಆಪ್ತಮಿತ್ರ ಟರ್ಕಿ, ಭಾರತಕ್ಕೆ ವಿರೋಧಿಯಾಗಿ ವರ್ತಿಸುತ್ತಿದ್ದು, ಭಾರತ ಸಹ ಟರ್ಕಿಗೆ ಎದುರಾಳಿಗಳಾದ ದೇಶಗಳೊಂದಿಗೆ ಸ್ನೇಹ ಗಾಢಗೊಳಿಸುತ್ತಿದೆ. ಗ್ರೀಸ್ ಸಹ ಟರ್ಕಿಗೆ ಕಡುವೈರಿ ರಾಷ್ಟ್ರವಾಗಿದ್ದು, ಇತ್ತೀಚೆಗೆ ಗ್ರೀಸ್-ಭಾರತ ಸಂಬಂಧ ಬಲವಾಗಿ ಬೆಳೆಯುತ್ತಿದೆ.
RDO ಅಭಿವೃದ್ಧಿಪಡಿಸಿದ ರುದ್ರಂ ಕ್ಷಿಪಣಿಗಳು ಸೂಪರ್ಸಾನಿಕ್ ಮತ್ತು ಹೈಪರ್ಸಾನಿಕ್ ವೇಗದಲ್ಲಿದೆ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL), ಭಾರತ್ ಡೈನಾಮಿಕ್ಸ್ ಮತ್ತು ಅದಾನಿ ಡಿಫೆನ್ಸ್ ಸಂಸ್ಥೆಗಳು ಈ ಕ್ಷಿಪಣಿಗಳನ್ನು ತಯಾರಿಸುತ್ತಿವೆ. ಈ ಕ್ಷಿಪಣಿಗಳು ಶತ್ರು ರಾಡಾರ್‌ಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಲು ಬಳಸಲಾಗುತ್ತವೆ. ಇವುಗಳನ್ನು SEAD (ಶತ್ರು ಏರ್ ಡಿಫೆನ್ಸ್ ನಿಷ್ಕ್ರಿಯಗೊಳಿಸುವುದು) ಹಾಗೂ DEAD (ನಾಶ ಮಾಡುವುದು) ಮಿಷನ್‌ಗಳಲ್ಲಿ ಬಳಸುತ್ತಾರೆ.
ಗ್ರೀಸ್‌ನ ವಾಯುಪಡೆ ಬಳಿ ಈಗ 24 ರಫೇಲ್ ಜೆಟ್‌ಗಳಿವೆ. ಆದರೆ, ಈ ಜೆಟ್‌ಗಳಿಗೆ ಹೊಂದಬಲ್ಲ ARM ಕ್ಷಿಪಣಿಗಳ ಕೊರತೆ ಇದೆ. ಅಮೆರಿಕದ AGM-88 HARM ಕ್ಷಿಪಣಿಗಳನ್ನು ಬಳಸುತ್ತಿದ್ದರೂ, ಅವು ದುಬಾರಿ. ಫ್ರಾನ್ಸ್ ಅಭಿವೃದ್ಧಿಪಡಿಸುತ್ತಿರುವ ಆರ್ಜೆ10 ಕ್ಷಿಪಣಿಗಳು ಗ್ರೀಸ್‌ನ ರಫೇಲ್‌ಗಳಿಗೆ ಹೊಂದಿಕೆಯಾಗುತ್ತಿಲ್ಲ.
ಈ ಹಿನ್ನೆಲೆಯಲ್ಲಿ, ಭಾರತದ ರುದ್ರಂ ಕ್ಷಿಪಣಿಗಳು ಉತ್ತಮ ಪರ್ಯಾಯ ಎನಿಸುತ್ತಿವೆ. ಇವು ಕಡಿಮೆ ಖರ್ಚಿನ ಜೊತೆಗೆ ಹಲವು ಪ್ಲಾಟ್‌ಫಾರ್ಮ್‌ಗಳಿಗೆ ಹೊಂದಿಕೊಳ್ಳುತ್ತವೆ.
ಕೇವಲ ಗ್ರೀಸ್ ಅಲ್ಲದೆ, ನ್ಯಾಟೋ ಸದಸ್ಯರಾದ ಜರ್ಮನಿ, ಪೋಲ್ಯಾಂಡ್ ಕೂಡ ರುದ್ರಂ ಕ್ಷಿಪಣಿಗಳ ಕುರಿತು ಆಸಕ್ತಿ ತೋರಿಸುತ್ತಿವೆ. ಇದರಿಂದ ಭಾರತಕ್ಕೆ ರಕ್ಷಣಾತ್ಮಕ ತಂತ್ರಜ್ಞಾನದಲ್ಲಿ ಹೊಸ ಅಂತಾರಾಷ್ಟ್ರೀಯ ಅವಕಾಶಗಳು ಸೃಷ್ಟಿಯಾಗುವ ಸಾಧ್ಯತೆ ಇದೆ.
ರುದ್ರಂ -1 ಕ್ಷಿಪಣಿಯ ಶ್ರೇಣಿ 100-250 ಕಿಮೀ, ರುದ್ರಂ-2 ಶ್ರೇಣಿ 300 ಕಿಮೀ. ಇತ್ತೀಚೆಗೆ DRDO, 550 ಕಿಮೀ ಶ್ರೇಣಿಯ ರುದ್ರಂ-3 ಕ್ಷಿಪಣಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದೆ.