ಇತ್ತೀಚೆಗೆ ನಡೆದ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹಮಾಸ್ ಮಿಲಿಟರಿ ಮುಖ್ಯಸ್ಥ (Hamas military chief) ಮೊಹಮ್ಮದ್ ಡೀಫ್ ಸಾವನ್ನಪ್ಪಿದ್ದಾರೆ ಎಂಬುದನ್ನು ಹಮಾಸ್ ಒಪ್ಪಿಕೊಂಡಿದೆ. ಈ ಬಗ್ಗೆ ಇಸ್ರೇಲಿ ಮಿಲಿಟರಿ ಆಗಸ್ಟ್‌ನಲ್ಲಿ ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿತ್ತು.
ಜುಲೈ 13ರಂದು, ಇಸ್ರೇಲಿ ಯುದ್ಧ ವಿಮಾನಗಳು ಖಾನ್ ಯುನಿಸ್ ಪ್ರದೇಶದ ಮೇಲೆ ದಾಳಿ ನಡೆಸಿ ಡೀಫ್ ಅವರನ್ನು ಹೊಡೆದುರುಳಿಸಿದೆ. ಅವರು ಚಿಕ್ಕವಯಸ್ಸಿನಲ್ಲಿ ಹಮಾಸ್‌ಗೆ ಸೇರಿದ್ದರು ಮತ್ತು 2002ರಲ್ಲಿ ಕಸ್ಸಾಮ್ ಬ್ರಿಗೇಡ್ಸ್‌ನ ನಾಯಕನಾಗಿದ್ದರು. 1996ರಲ್ಲಿ ಆತ್ಮಹತ್ಯಾ ಬಾಂಬ್ ದಾಳಿಗಳನ್ನು ನಡೆಸುವ ಮೂಲಕ ಇಸ್ರೇಲ್ ವಿರುದ್ಧ ಹಲವಾರು ದಾಳಿಗಳನ್ನು ನಡೆಸಿದ್ದರು.
ಇಸ್ರೇಲಿ ಪಡೆಗಳು ಜುಲೈನಲ್ಲಿ ಡೀಫ್ ಅವರನ್ನು ಕೊಲ್ಲಲು ಗಾಜಾದ ಜನನಿಬಿಡ ಪ್ರದೇಶದ ಮೇಲೆ ಭಾರಿ ಬಾಂಬ್ ದಾಳಿ ನಡೆಸಿದವು. ಈ ದಾಳಿಯಲ್ಲಿ ಅನೇಕ ನಾಗರಿಕರು ಮೃತಪಟ್ಟಿದ್ದರು. ಡೀಫ್ ಅವರನ್ನು ಕೊಂದಿರುವ ಬಗ್ಗೆ ಆ ಸಮಯದಲ್ಲಿ ಹಮಾಸ್ ಸ್ಪಷ್ಟವಾಗಿ ಹೇಳಿರಲಿಲ್ಲ. ಇಸ್ರೇಲಿ ಗುಪ್ತಚರ ಪ್ರಕಾರ, ಡೀಫ್ ದಶಕಗಳ ಕಾಲ ಇಸ್ರೇಲಿಗೆ ಅತಿ ಅಪಾಯಕಾರಿಯಾದ ಭಯೋತ್ಪಾದಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು.
ಮೊದಲು ಅವರ ಮೇಲೆ ಎಂಟು ಬಾರಿ ದಾಳಿಗಳು ನಡೆದಿದ್ದರೂ, ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. 2014ರ ದಾಳಿಯಲ್ಲಿ ಅವರ ಹೆಂಡತಿ ಮತ್ತು ಮಗ ಮೃತಪಟ್ಟಿದ್ದರು. ಅಕ್ಟೋಬರ್ 7ರಂದು, ಇಸ್ರೇಲ್ ಮೇಲೆ ನಡೆದ ಹಮಾಸ್ ದಾಳಿಯ ಮಾಸ್ಟರ್ ಮೈಂಡ್ ಅವರೇ ಎಂದು ಇಸ್ರೇಲ್ ಹೇಳಿತ್ತು. ಈ ನಡುವೆ, ಟೆಹ್ರಾನ್‌ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯಾ ಹತ್ಯೆಯಾದ ಬಳಿಕ ಇರಾನ್, ಇಸ್ರೇಲ್ ವಿರುದ್ಧ ಸೇಡು ತೀರಿಸಿಕೊಳ್ಳುವಂತೆ ಬೆದರಿಕೆ ಹಾಕಿದೆ. ಇದರಿಂದ ಯಾವುದೇ ಹಾನಿಯನ್ನು ಎದುರಿಸಲು ಇಸ್ರೇಲ್ ಸೇನೆ ಸಿದ್ಧವಾಗಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.