Cairo: ಇಸ್ರೇಲ್ ಮತ್ತು ಹಮಾಸ್ (Israel-Hamas) ನಡುವಿನ ಸಮರಕ್ಕೆ ಬುಧವಾರ ರಾತ್ರಿ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿದ್ದು, ಈ ವಿರಾಮವು 6 ವಾರಗಳ ಕಾಲ ಇರಲಿದೆ. ಈ ಅವಧಿಯಲ್ಲಿ ಪರಸ್ಪರರ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಎರಡೂ ಪಕ್ಷಗಳು ಒಪ್ಪಂದದ ಎಲ್ಲ ಅಂಶಗಳನ್ನು ಪಾಲಿಸಿದರೆ, ಯುದ್ಧ ಸ್ಥಗಿತದ ಕುರಿತು ಪೂರಕ ಮಾತುಕತೆಗಳು ಕೂಡಾ ನಡೆಯಬಹುದು.
ಈ ಸಂಧಾನವನ್ನು ಅರಬ್ ದೇಶಗಳು ಮತ್ತು ಅಮೆರಿಕದ ಪ್ರತಿನಿಧಿಗಳು ಕತಾರ್ ನಲ್ಲಿ ನಡೆಸಿದ ಸಂಧಾನದ ಫಲವಾಗಿ ಸಾಧಿಸಲಾಯಿತು. ಹಮಾಸ್ ಮತ್ತು ಇಸ್ರೇಲ್ ಎರಡೂ ಕಡೆಯಿಂದ ಸಮ್ಮತಿ ವ್ಯಕ್ತವಾಗಿದೆ, ಮತ್ತು ಇಸ್ರೇಲ್ ಸಚಿವ ಸಂಪುಟ ಈ ಒಪ್ಪಂದಕ್ಕೆ ಅನುಮೋದನೆ ನೀಡಿದೆ.
2023ರ ಅ.7ರಂದು ಹಮಾಸ್ ಉಗ್ರರು ಇಸ್ರೇಲ್ ಗೆ ನುಗ್ಗಿ 1200 ಜನರನ್ನು ಹತ್ಯೆಗೈದು, 250 ಜನರನ್ನು ಅಪಹರಿಸಿದ್ದರು. ಇದರಿಂದ ಹಮಾಸ್ ಮತ್ತು ಇಸ್ರೇಲ್ ನಡುವಿನ ಭೀಕರ ಯುದ್ಧ ಶುರುವಾಗಿದ್ದು, ಇದುವರೆಗೆ ಗಾಜಾಪಟ್ಟಿ ಪ್ರದೇಶದಲ್ಲಿ 45000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ಇಸ್ರೇಲ್‌ನಲ್ಲೂ 2000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.