
Hyderabad, 2013: ದಿಲ್ಸುಖ್ನಗರ ಬಾಂಬ್ ಸ್ಫೋಟ (Hyderabad bomb blast) ಪ್ರಕರಣದಲ್ಲಿ ಐವರು ಅಪರಾಧಿಗಳಿಗೆ ಮರಣದಂಡನೆ ನೀಡಿದ್ದ NIA ವಿಶೇಷ ನ್ಯಾಯಾಲಯದ ತೀರ್ಪನ್ನು ತೆಲಂಗಾಣ ಹೈಕೋರ್ಟ್ ಮಂಗಳವಾರ ಉಳಿಸಿಕೊಂಡಿದೆ. ಅಪರಾಧಿಗಳ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಕೆ. ಲಕ್ಷ್ಮಣ್ ಮತ್ತು ಪಿ.ಸುಧಾ ಅವರಿಬ್ಬರ ವಿಭಾಗೀಯ ಪೀಠ ತಿರಸ್ಕರಿಸಿತು.
NIA ತೀರ್ಪು (2016): ಡಿಸೆಂಬರ್ 13, 2016ರಂದು ಎನ್ಐಎ ನ್ಯಾಯಾಲಯವು ಅಸದುಲ್ಲಾ ಅಖ್ತರ್, ಜಿಯಾ ಉರ್ ರೆಹಮಾನ್, ಮೊಹಮ್ಮದ್ ತಹ್ಸೀನ್ ಅಖ್ತರ್, ಯಾಸಿನ್ ಭಟ್ಕಳ್, ಮತ್ತು ಅಜಾಜ್ ಶೇಖ್ ಎಂಬ ಐವರು ಆರೋಪಿಗಳಿಗೆ ಮರಣದಂಡನೆ ವಿಧಿಸಿತ್ತು. ಇವರಲ್ಲಿ ರಿಯಾಜ್ ಭಟ್ಕಳ್ ಎಂಬ ಪ್ರಮುಖ ಆರೋಪಿ ಇನ್ನೂ ಪರಾರಿಯಾಗಿದ್ದಾನೆ.
ಸ್ಫೋಟದ ವಿವರ (2013): ಫೆಬ್ರವರಿ 21ರಂದು ಹೈದರಾಬಾದ್‌ನ ದಿಲ್ಸುಖ್ನಗರ ಬಸ್ ನಿಲ್ದಾಣ ಮತ್ತು ಮಿರ್ಚಿ ಸೆಂಟರ್ ಬಳಿ ಎರಡು ಬಾಂಬ್ ಸ್ಫೋಟಗಳು ಸಂಭವಿಸಿ 18 ಮಂದಿ ಮೃತಪಟ್ಟಿದ್ದರು, 131 ಜನರಿಗೆ ಗಾಯಗಳಾಗಿತ್ತು. ಸ್ಫೋಟಗಳು ಸಂಜೆ 7 ಗಂಟೆ ವೇಳೆಗೆ ಸಂಭವಿಸಿತ್ತು.
ತನಿಖೆ ಹಾಗೂ ಬಂಧನೆಗಳು: ಘಟನೆಯ ತನಿಖೆಯನ್ನು ಎನ್ಐಎ ನಡೆಸಿದ್ದು, ಇಂದೋ-ನೇಪಾಳ ಗಡಿಯಿಂದ ಯಾಸಿನ್ ಭಟ್ಕಳ್ ಮತ್ತು ಅಸದುಲ್ಲಾ ಅಖ್ತರ್ ಅವರನ್ನು ಬಂಧಿಸಿತ್ತು. ಬಳಿಕ ಬಿಹಾರದ ತಹ್ಸೀನ್ ಅಖ್ತರ್ ಮತ್ತು ಪಾಕಿಸ್ತಾನದ ಜಿಯಾ ಉರ್ ರೆಹಮಾನ್ ಅವರನ್ನು ದೆಹಲಿ ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿ, ಎನ್ಐಎಗೆ ಹಸ್ತಾಂತರಿಸಿದರು. ಪುಣೆಯ ಅಜಾಜ್ ಶೇಖ್ ಕೂಡ ಬಂಧನಕ್ಕೊಳಗಾಗಿದ್ದ.
ಪ್ರಮುಖ ಆರೋಪಿ ರಿಯಾಜ್ ಭಟ್ಕಳ್: ಈತನನ್ನು ಐಎಂ ಸಂಘಟನೆಯ ಸ್ಥಾಪಕ ಸದಸ್ಯ ಎಂದು ಎನ್ಐಎ ಗುರುತಿಸಿದ್ದು, ಆತ ಪಾಕಿಸ್ತಾನದಲ್ಲಿ ಅಡಗಿದ್ದಾನೆ ಎನ್ನಲಾಗಿದೆ. ಎನ್ಐಎ ಇಂಟರ್‌ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದೆ.